ಬೆಂಗಳೂರು | ಮಾಲ್‍ನಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ ಆರೋಪಿ

ಬೆಂಗಳೂರು, ನ.3 ನಗರದ ಪ್ರತಿಷ್ಠಿತ ಮಾಲ್ ಒಂದರಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತನೆ ಮಾಡಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ನ್ಯಾಯಾಲಯಕ್ಕೆ ಗುರುವಾರ ಶರಣಾಗಿದ್ದಾನೆ.
ಮಾಲ್‍ನಲ್ಲಿ ಯುವತಿಯ ಹಿಂಭಾಗ ಮುಟ್ಟಿ ಢಿಕ್ಕಿ ಹೊಡೆದು ಅಸಹ್ಯವಾಗಿ ವರ್ತಿಸಿದ್ದ ಆರೋಪಿ ಬಸವೇಶ್ವರನಗರ ನಿವಾಸಿ ನಿವೃತ್ತ ಮುಖ್ಯಶಿಕ್ಷಕ ಅಶ್ವತ್ಥನಾರಾಯಣ ಘಟನೆ ಬಳಿಕ ಮನೆಗೆ ಬೀಗ ಹಾಕಿಕೊಂಡು ನಾಪತ್ತೆಯಾಗಿದ್ದ ಎಂದು ಹೇಳಲಾಗಿದೆ.
ಆರೋಪಿಯು ಅ. 29ರಂದು ನಗರದ ಮಾಲ್ ಒಂದರಲ್ಲಿ ಯವತಿಯ ಹಿಂಭಾಗಕ್ಕೆ ಢಿಕ್ಕಿ ಹೊಡೆದು ಅಸಹ್ಯವಾಗಿ ಆಕೆಯ ದೇಹವನ್ನು ಸ್ಪರ್ಶಿಸಿದ್ದ. ಇದನ್ನು ಯಶವಂತ್ ಎಂಬಾತ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ. ಈ ವಿಡಿಯೋ ಆಧಾರದ ಮೇಲೆ ಮಾಲ್ ನ ಆಡಳಿತ ಮಂಡಳಿ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಈ ಸಂಬಂಧ ಎಫ್‌ಐಆರ್ ಸಹ ದಾಖಲಾಗಿತ್ತು.
ಜಾಮೀನು ಮಂಜೂರು
ಬಂಧನದ ಭೀತಿಯಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಅಶ್ವತ್ಥನಾರಾಯಣ ಗುರುವಾರ ಮಧ್ಯಾಹ್ನದ ವೇಳೆ ವಕೀಲರೊಂದಿಗೆ ಎಸಿಎಂಎಂ 2ರ ನ್ಯಾಯಾಧೀಶರ ಮುಂದೆ ಹಾಜರಾಗಿದ್ದಾನೆ. ನಂತರ, ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿ ಪರಿಶೀಲಿಸಿದ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ʼಸದ್ಯ ಆರೋಪಿ ಮನೆಗೆ ಹೋಗಿದ್ದಾನೆ. ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದುʼ ಎಂದು ಪೊಲೀಸ್ ಮೂಲಗಳುತಿಳಿಸಿವೆ.







