ಬೆಂಗಳೂರು: ಪಿಜಿಯಲ್ಲಿ ಕಾನೂನು ವಿದ್ಯಾರ್ಥಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಆ.7: ಕಾನೂನು ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿರುವುದು ವರದಿಯಾಗಿದೆ.
ಹಿಮಾಚಲಪ್ರದೇಶ ಮೂಲದ ನಾಗರಬಾವಿಯ ಖಾಸಗಿ ಕಾಲೇಜಿನಲ್ಲಿ ಎಲ್ಎಲ್ಬಿ ಮೂರನೇ ವರ್ಷ ವ್ಯಾಸಂಗ ಮಾಡುತ್ತಿದ್ದ ಆರ್ಯಕುಮಾರ್ ನಡ್ಡಾ (23) ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ.
ಶ್ರೀಗಂಧಕಾವಲು ಬಳಿಯ ‘ಡಿ’ ಗ್ರೂಪ್ ಲೇಔಟ್ನಲ್ಲಿರುವ ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ ವಾಸವಿದ್ದ ಆರ್ಯಕುಮಾರ್ ನಡ್ಡಾ ಆ.6ರಂದು ಸ್ನೇಹಿತರು ಹೊರಗೆ ಹೋಗಿದ್ದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರ ಮೈಗ್ರೇನ್ನಿಂದ ಬಳಲುತ್ತಿದ್ದರಿಂದ, ವಿದ್ಯಾರ್ಥಿ ಖಿನ್ನತೆಗೆ ಒಳಗಾಗಿದ್ದ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿ ಯಾವುದೇ ಡೆತ್ ನೋಟ್ ಅನ್ನು ಬರೆದಿಲ್ಲ. ಘಟನೆಯ ಬಗ್ಗೆ ಮೃತ ವಿದ್ಯಾರ್ಥಿಯ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಪೋಷಕರು ನಗರಕ್ಕೆ ಬಂದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪ್ರಕರಣ ದಾಖಲಿಸಿರುವ ಅನ್ನಪೂರ್ಣೇಶ್ವರಿ ಠಾಣಾ ಪೊಲೀಸರು ತಿಳಿಸಿದ್ದಾರೆ.







