ಬೆಂಗಳೂರು ತಂತ್ರಜ್ಞಾನ ಶೃಂಗಸಭೆ : ‘ನಿಪುಣ ಕರ್ನಾಟಕ’ ಯೋಜನೆ ಪ್ರಕಟ

ಬೆಂಗಳೂರು : ವೃತ್ತಿನಿರತರ ಕೌಶಲವೃದ್ಧಿಗೆ ಒತ್ತು ನೀಡುತ್ತಿರುವ ರಾಜ್ಯ ಸರಕಾರವು, ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಎರಡನೆ ದಿನವಾದ ಭವಿಷ್ಯಕ್ಕೆ ಸಿದ್ಧರಿರುವ ಕುಶಲ ಉದ್ಯೋಗಿಗಳನ್ನು ಸೃಷ್ಟಿಸಲು ಪ್ರಮುಖ ಕಾರ್ಪೊರೇಟ್‍ಗಳ ಪಾಲುದಾರಿಕೆಯಡಿ ‘ನಿಪುಣ ಕರ್ನಾಟಕ’ ಯೋಜನೆ ಪ್ರಕಟಿಸಿದೆ.
ಬುಧವಾರ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರ್‍ರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಲಾಗಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಇನ್ನಿತರ ಗಣ್ಯರ ಸಮುಖದಲ್ಲಿ, ನಿಪುಣ ಕರ್ನಾಟಕ ಯೋಜನೆ ಹಾಗೂ ಬೆಂಗಳೂರು ನಾವೀನ್ಯತಾ ವರದಿಯನ್ನು ಬಿಡುಗಡೆ ಮಾಡಿದರು.
ಕುಶಲ ಉದ್ಯೋಗಿಗಳಿಗೆ ಬೇಡಿಕೆ ಹೆಚ್ಚಿಗೆ ಇರುವ ಕೃತಕ ಬುದ್ಧಿಮತ್ತೆ, ಸೈಬರ್ ಸುರಕ್ಷತೆ, ಡೇಟಾ ಸೈನ್ಸ್ ಕ್ಷೇತ್ರಗಳಲ್ಲಿ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಈ ತರಬೇತಿ ಯೋಜನೆ ಫಲವಾಗಿ 2,800 ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ನಿರೀಕ್ಷಿಸಲಾಗಿದೆ.
4 ಸಾವಿರ ಯುವ ಜನರ ವೃತ್ತಿ ಕೌಶಲ ಹೆಚ್ಚಿಸಲಿರುವ ಈ ಕಾರ್ಯಕ್ರಮವು ದೂರಗಾಮಿ ಪರಿಣಾಮ ಬೀರಲಿದೆ. ಪ್ರತಿಷ್ಠಿತ ಕಾರ್ಪೊರೇಟ್‍ಗಳಾದ ಕ್ಯಾಪ್‍ಜೆಮಿನಿ, ವೆಲ್ಸ್ ಫರ್ಗೊ, ಸ್ಟ್ಯಾಂಡರ್ಡ್ ಚಾರ್ಟರ್ಡ್ ಮತ್ತು ಸುಮೆರಿ ಕಂಪನಿಗಳ ಉದ್ಯೋಗಿಗಳು ತರಬೇತಿ ನೀಡಲಿದ್ದಾರೆ. ಐಸಿಟಿ ಅಕಾಡೆಮಿ, ಎಆರ್‌ಡಬ್ಲ್ಯುಎಸ್, ಎಫ್‍ಯುಇಎಲ್ ಮತ್ತು ಎಐಎಸ್‍ಇಸಿಟಿ-ತರಬೇತಿ ಪಾಲುದಾರ ಸಂಸ್ಥೆಗಳಾಗಿವೆ.
ಹೆಚ್ಚುವರಿಯಾಗಿ 10 ಸಾವಿರ ಯುವ ಜನರ ವೃತ್ತಿ ಕೌಶಲ ಹೆಚ್ಚಿಸಲು ಐಟಿ, ಜೈವಿಕ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಆ್ಯಂಡ್ ಮ್ಯಾನುಫ್ಯಾಕ್ಚರಿಂಗ್ (ಇಎಸ್‍ಡಿಎಂ), ಬ್ಯಾಂಕಿಂಗ್, ಹಣಕಾಸು ಸೇವೆ ಮತ್ತು ವಿಮೆ (ಬಿಎಫ್‍ಎಸ್‍ಐ) ವಲಯದ ಪ್ರಮುಖ ಕಂಪನಿಗಳು ತರಬೇತಿ ನೀಡಲು ಇಂಗಿತ ವ್ಯಕ್ತಪಡಿಸಿವೆ.
ನವೋದ್ಯಮ ಉತ್ಪನ್ನಗಳ ಪ್ರದರ್ಶನ: ರಾಜ್ಯ ಸರಕಾರದ ಎಲೆಕ್ಟ್ರಾನಿಕ್ಸ್ ಇಲಾಖೆಯು, ತಂತ್ರಜ್ಞಾನ ಶೃಂಗ ಸಭೆಯ ಮೇಳದಲ್ಲಿ 50 ನವೋದ್ಯಮಗಳ ನಾವೀನ್ಯತಾ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದು, ಮೇಳಕ್ಕೆ ಭೇಟಿ ನೀಡಿದವರ ಗಮನ ಸೆಳೆಯುತ್ತಿವೆ. ಐಟಿ, ಕೃಷಿ ತಂತ್ರಜ್ಞಾನ, ವೈದ್ಯಕೀಯ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಡೀಪ್‍ಟೆಕ್, ಐಒಟಿ, ಸೈಬರ್ ಸುರಕ್ಷತೆ, ವೈಮಾಂತರಿಕ್ಷ ಹಾಗೂ ರಕ್ಷಣೆ, ವಂಚನೆಯ ವಹಿವಾಟು ತಡೆಯುವ ಆ್ಯಪ್ ಮುಂತಾದವು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.
ಬೆಂಗಳೂರು ನಾವೀನ್ಯತಾ ವರದಿ ಬಿಡುಗಡೆ: ಶೃಂಗಸಭೆಯಲ್ಲಿ ಬೆಂಗಳೂರು ನಾವೀನ್ಯತಾ ವರದಿ ಬಿಡುಗಡೆ ಮಾಡಲಾಗಿದ್ದು, ಬೆಂಗಳೂರು ನಗರವು ಈಗ ಕೃತಕ ಬುದ್ಧಿಮತ್ತೆ ಹಾಗೂ ಕ್ವಾಂಟಮ್ ಕಂಪ್ಯೂಟಿಂಗ್ ಕೇಂದ್ರವಾಗಿ ರೂಪುಗೊಂಡಿರುವುದರ ಮೇಲೆ ಬೆಳಕು ಚೆಲ್ಲಿದೆ. ಈ ಕ್ಷೇತ್ರಗಳ ಜಾಗತಿಕ ದೈತ್ಯ ಕಂಪನಿಗಳಾದ ಓಪನ್‍ಎಐ, ಆ್ಯಂಥ್ರೊಫಿಕ್ ಮತ್ತು ಗ್ರಾಫ್‍ಕೋರ್-ಗಳನ್ನು ಆಕರ್ಷಿಸುತ್ತಿದೆ.
ಬೆಂಗಳೂರು ಈಗ ವಿಶ್ವದ ಐದನೆ ಅತಿದೊಡ್ಡ ಯೂನಿಕಾರ್ನ್ ಶಕ್ತಿಕೇಂದ್ರವಾಗಿದೆ. ಒಂದು ಶತಕೋಟಿ ಡಾಲರ್ ಮೊತ್ತದ ವಹಿವಾಟು ನಡೆಸುವ (ಯೂನಿಕಾರ್ನ್) 53 ನವೋದ್ಯಮಗಳು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳ ಒಟ್ಟಾರೆ ವಹಿವಾಟಿನ ಮೊತ್ತ ಅಂದಾಜು 1.70 ಲಕ್ಷ ಕೋಟಿ ರೂ.( 192 ಶತಕೋಟಿ ಡಾಲರ್) ಗಳಷ್ಟಿದೆ. ದೇಶದ ಒಟ್ಟಾರೆ ಯೂನಿಕಾರ್ನ್ ಮೌಲ್ಯಕ್ಕೆ ಬೆಂಗಳೂರು ಯೂನಿಕಾರ್ನ್‍ಗಳ ಕೊಡುಗೆ ಶೇ 42ರಷ್ಟಿದೆ.
ಸೂನಿಕಾರ್ನ್‍ಗಳ ತಾಣ: ಬೆಂಗಳೂರು ನಗರವು ಯೂನಿಕಾರ್ನ್ ಹಾದಿಯಲ್ಲಿ ಸಾಗಿರುವ ನವೋದ್ಯಮಗಳನ್ನು(ಸೂನಿಕಾರ್ನ್) ಚುಂಬಕದಂತೆ ಸೆಳೆಯುತ್ತಿದೆ. ನಗರದಲ್ಲಿ 39 ಸೂನಿಕಾರ್ನ್‍ಗಳಿದ್ದು, ದಿಲ್ಲಿ ಎನ್‍ಸಿಆರ್ (30), ಮುಂಬೈ (21) ಗಿಂತ ಮುಂಚೂಣಿಯಲ್ಲಿದೆ. ಇದು ಜಾಗತಿಕ ತಂತ್ರಜ್ಞಾನ ಪ್ರತಿಭಾನ್ವಿತರನ್ನು ಸೃಷ್ಟಿಸುತ್ತಿರುವ ಬೆಂಗಳೂರಿನ ಪ್ರಾಬಲ್ಯಕ್ಕೆ ಕನ್ನಡಿ ಹಿಡಿಯುತ್ತದೆ.
ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ): ದೇಶದಲ್ಲಿರುವ ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ ಶೇ.40ರಷ್ಟು ಕೇಂದ್ರಗಳಿಗೆ ಬೆಂಗಳೂರು ಅವಕಾಶ ಕಲ್ಪಿಸಿದೆ. ಇದು 2029ರ ವೇಳೆಗೆ ದುಪ್ಪಟ್ಟಾಗುವ ನಿರೀಕ್ಷೆ ಇದೆ.
ಡೀಪ್‍ಟೆಕ್ ಹಾಗೂ ಪೇಟೆಂಟ್‍ನಲ್ಲಿ ಮುನ್ನಡೆ: 2020 ರಿಂದ 2023ರ ಅವಧಿಯಲ್ಲಿ ಬೆಂಗಳೂರಿನ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ಕ್ಷೇತ್ರಗಳಲ್ಲಿನ ಕಂಪನಿಗಳು ಗರಿಷ್ಠ ಪೇಟೆಂಟ್‍ಗಳನ್ನು ಪಡೆದುಕೊಂಡಿವೆ.
ಮಹಿಳೆಯರ ನೇತೃತ್ವದಲ್ಲಿನ ನಾವೀನ್ಯತೆ: ಮಹಿಳೆಯರ ನೇತೃತ್ವದಲ್ಲಿನ ನವೋದ್ಯಮಗಳ ಸಂಖ್ಯೆಯಲ್ಲಿಯೂ ಬೆಂಗಳೂರು ಮುಂಚೂಣಿಯಲ್ಲಿದೆ. ಇಂತಹ 1,600 ನವೋದ್ಯಮಗಳು ಇಲ್ಲಿವೆ.
ಬೆಂಗಳೂರಿನ ಆಚೆಗೆ ವಿಸ್ತರಣೆ: 450ಕ್ಕೂ ಹೆಚ್ಚು ನವೊದ್ಯಮಗಳು ಬೆಂಗಳೂರಿನ ಆಚೆಗಿನ ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಂದರ್ಭದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಶರತ್‍ಕುಮಾರ್ ಬಚ್ಚೇಗೌಡ, ಸರಕಾರದ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್, ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಮಂಜುಳಾ ಎನ್. ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







