Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. ಕನ್ನಡ ನೆಲದಲ್ಲಿ ಸಿಕ್ಕಿರುವ ಗೌರವ...

ಕನ್ನಡ ನೆಲದಲ್ಲಿ ಸಿಕ್ಕಿರುವ ಗೌರವ ಜಾಗತಿಕ ಪ್ರಶಸ್ತಿಗಿಂತ ಹೆಚ್ಚು ಹೃದಯ ಸ್ಪರ್ಶಿ : ಬಾನು ಮುಷ್ತಾಕ್

ವಾರ್ತಾಭಾರತಿವಾರ್ತಾಭಾರತಿ2 Jun 2025 6:44 PM IST
share
ಕನ್ನಡ ನೆಲದಲ್ಲಿ ಸಿಕ್ಕಿರುವ ಗೌರವ ಜಾಗತಿಕ ಪ್ರಶಸ್ತಿಗಿಂತ ಹೆಚ್ಚು ಹೃದಯ ಸ್ಪರ್ಶಿ : ಬಾನು ಮುಷ್ತಾಕ್

ಬೆಂಗಳೂರು : ಕನ್ನಡದ ನೆಲದಲ್ಲಿ ನನಗೆ ಸಿಕ್ಕಿರುವ ಈ ಗೌರವವು ಯಾವುದೇ ಜಾಗತಿಕ ಪ್ರಶಸ್ತಿಗಿಂತ ಹೆಚ್ಚು ಹೃದಯ ಸ್ಪರ್ಶಿಯಾಗಿದೆ. ಈ ನನ್ನ ತವರು ನೆಲ ನನ್ನ ಬೇರುಗಳನ್ನು ಆಳಗೊಳಿಸಿ, ಆಲೋಚನೆಗಳನ್ನು ರೂಪಿಸಿ, ನನ್ನ ಸೃಜನಶೀಲತೆಗೆ ಪ್ರೇರಣೆ ನೀಡಿದೆ ಎಂದು ಅಂತರ್‌ರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ತಿಳಿಸಿದರು.

ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಸರಕಾರಿ ಅಭಿನಂದನಾ ಕಾರ್ಯಕ್ರಮದಲ್ಲಿ ಅನುವಾದಕಿ ದೀಪಾ ಭಾಸ್ತಿ ಅವರೊಂದಿಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬೂಕರ್ ಬಹುಮಾನ ಗಳಿಸುವುದು ನನ್ನ ಕನಸಿನ ಗಂಟು ಆಗಿತ್ತು. ನಿಮ್ಮೆಲ್ಲರ ಒತ್ತಾಸೆ, ಹೃದಯಾಂತರಾಳದ ಹಾರೈಕೆಯಿಂದಾಗಿ, ವಿದೇಶದ ನೆಲದಲ್ಲಿ, ಅಪರಿಚಿತರ ನಡುವೆ ನನ್ನ ನಾಡಿನ ಧ್ವನಿಯನ್ನು ಮೊಳಗಿಸಲು ಸಾಧ್ಯವಾಯಿತು ಎಂದು ಹೇಳಿದರು.

ಮಲೆನಾಡು, ಮೈದಾನದ ಮಿಶ್ರ ಮಣ್ಣು, ಹಾಸನದ ಮೊಹಲ್ಲಾದಲ್ಲಿ ಅಡ್ಡಾಡುತ್ತಾ, ಹೃದಯ ಸಂವಾದದಲ್ಲಿ ನಿರತಳಾಗಿದ್ದ ನನಗೆ ಕರ್ನಾಟಕ ಸರಕಾರದಿಂದ ಜನತೆಯ ಪರವಾಗಿ ನೀಡಲಾದ ಈ ಗೌರವ ಯಾವುದೇ ಜಾಗತಿಕ ಪ್ರಶಸ್ತಿಗಿಂತ ಹೆಚ್ಚು ಹೃದಯ ಸ್ಪರ್ಶಿಯಾಗಿದೆ. ಇಲ್ಲಿಯೇ ನಾನು ಜೀವನದ ಹೋರಾಟ, ಬದುಕಿನ ಜೊತೆ ಮುಖಾಮುಖಿಯಾದೆ. ನಮ್ಮ ಸಂಸ್ಕೃತಿಯ ಸಮೃದ್ಧಿಯನ್ನು ಅರಿತೆ, ನಮ್ಮ ಕತೆಗಳ ಶಕ್ತಿ, ಕಥನಗಳ ವಿಸ್ತಾರವನ್ನು ಕಲಿತೆ ಎಂದು ಅವರು ಹೇಳಿದರು.

ಈ ಕತೆಗಳು ನಮ್ಮ ನಾಡಿನ ಭೂ ದೃಶ್ಯಗಳಂತೆ ವೈವಿಧ್ಯಮಯವಾಗಿವೆ. ನಮ್ಮ ಇತಿಹಾಸದಂತೆ ಸಹನಶೀಲವಾಗಿವೆ, ನಮ್ಮ ಭವಿಷ್ಯತ್ತಿನಂತೆ ಉತ್ಸಾಹಭರಿತವಾಗಿವೆ. ಕನ್ನಡ ಭಾಷೆಯ ಮಹನ್ನತೆಯೂ ಅದರ ಬಹುರೂಪಿ ಹಾಗೂ ಒಳಗೊಳ್ಳುವ ಆಪ್ತತೆಯಲ್ಲಿ ಅಡಗಿದೆ ಎಂದು ಅವರು ಬಣ್ಣಿಸಿದರು.

ಬೂಕರ್ ಪ್ರಶಸ್ತಿ ಪಡೆದ ಬಳಿಕ ಉತ್ತರ ಭಾರತದ ಮಾಧ್ಯಮಗಳು ನನ್ನ ಸಂದರ್ಶನ ಮಾಡಿದಾಗ ‘ಕನ್ನಡದ ನೆಲದಲ್ಲಿ ಕನ್ನಡದ ಬಗ್ಗೆ ಅಭಿಮಾನ ಅಲ್ಲ, ಇತರ ಭಾಷೆಗಳ ಬಗ್ಗೆ ಅಸಹಿಷ್ಣುತೆಯಾಕಿದೆ?’ ಎಂದು ಪ್ರಶ್ನಿಸಿದರು. ‘ನೀವು ಕನ್ನಡದ ಬಗ್ಗೆ ಈ ರೀತಿಯ ನಿಲುವು ತಾಳುವುದು ತಪ್ಪು. ಕನ್ನಡದಷ್ಟು ಸಹಿಷ್ಣುತೆ ಇರುವ ಭಾಷೆಯನ್ನು ನಾನು ಈವರೆಗೆ ನೋಡಿಲ್ಲ. ಅದಕ್ಕೆ ಕನ್ನಡದ ಸಂಸ್ಕೃತಿಯೂ ಕಾರಣ. ಅಲ್ಲಿ ಬಹುಮುಖಿ ನೆಲೆ, ಬಹುಭಾಷೆಗೆ ಇರುವ ಗೌರವವನ್ನು ನೀವೇ ಹಾಳು ಮಾಡುತ್ತಿದ್ದೀರಾ? ಅದನ್ನು ನೀವು ಅರ್ಥ ಮಾಡಿಕೊಳ್ಳಿ’ ಎಂದು ನಾನು ಉತ್ತರಿಸಿದೆ ಎಂದು ಅವರು ಹೇಳಿದರು.

ಕನ್ನಡದ ನಿಲುವನ್ನು ಸ್ಪಷ್ಟಪಡಿಸುವ ಅವಶ್ಯಕತೆ ಪದೇ ಪದೇ ಬರುತ್ತಿದೆ. ಕನ್ನಡವು ಎಂಟು ಜ್ಞಾನಪೀಠ, ಒಂದು ಬೂಕರ್ ಪ್ರಶಸ್ತಿಯೊಂದಿಗೆ ಬಹುತ್ವ ಮತ್ತು ಸಾಮರಸ್ಯದ ಜೀವಂತ ಭಾಷೆ, ಎಲ್ಲ ದ್ರಾವಿಡ ಭಾಷೆಗಳೊಂದಿಗೆ ಸಹೋದರಿತ್ವ ಸಂಬಂಧ ಹೊಂದಿರುವ ಭಾಷೆ ಎಂದು ಬಾನು ಮುಷ್ತಾಕ್ ಹೇಳಿದರು.

ಈ ಗೌರವ ಒಂದು ಪುಸ್ತಕ ಹಾಗೂ ಪ್ರಶಸ್ತಿಯ ಮನ್ನಣೆಯಲ್ಲ. ಇದು ಕಥನದ ಶಾಶ್ವತ ಶಕ್ತಿ, ಜಾಗತಿಕ ವೇದಿಕೆಯಲ್ಲಿ ನಮ್ಮ ಧ್ವನಿಗಳು ಮಹತ್ವ ಹೊಂದಿವೆ ಎಂಬ ನಮ್ಮ ನಂಬಿಕೆಯ ಪ್ರಮಾಣ ಪತ್ರ. ರಾಜ್ಯದ ಯುವ ಲೇಖಕ ಬಳಗ ತಮ್ಮ ಸ್ವಂತ ಶಕ್ತಿಯನ್ನು ನಂಬಬೇಕು. ಹೇಳಲು ತವಕ ಪಡುವ ಕತೆಗಳಿಂದ ಕರ್ನಾಟಕದ ಮಣ್ಣು ಸಮೃದ್ಧವಾಗಿದೆ ಎಂದ ಬಾನು ಮುಷ್ತಾಕ್, ಸರಕಾರ ಅನುವಾದದ ಕೆಲಸಕ್ಕೆ ಮತ್ತಷ್ಟು ನೆರವು ನೀಡಬೇಕು ಎಂದು ಮನವಿ ಮಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅನುವಾದಕಿ ದೀಪಾ ಭಸ್ತಿ ಮಾತನಾಡಿ, ಕನ್ನಡ ಇತರ ಭಾಷೆಗಳಂತೆ ತನ್ನಲ್ಲಿ ಸಂಪೂರ್ಣವಾಗಿದೆ. ಕನ್ನಡ ಮೂಲದ ಕೃತಿಗೆ ಅಂತರ್‌ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸಿಕ್ಕಿದೆ, ಅನ್ನೋದಕ್ಕಿಂತ ಇಂಗ್ಲಿಷ್‍ಗೆ ನಮ್ಮ ಸಿರಿಗನ್ನಡದ ಪರಿಚಯವಾಗಿ ಸಂಪರ್ಕ ಬೆಳೆದ ಕಾರಣ, ಇಂಗ್ಲಿಷ್‍ಗೆ ಹೆಮ್ಮೆ ಬಂದಿದೆ. ಇಂಗ್ಲಿಷ್ ಇಷ್ಟು ದೊಡ್ಡ ಮಟ್ಟದಲ್ಲಿ ಹರಡಲು ಬೇರೆ ಬೇರೆ ಭಾಷೆಗಳಿಂದ ಪದಗಳನ್ನು ಪಡೆದುಕೊಳ್ಳುತ್ತ ತನ್ನನ್ನು ವಿಕಸನಗೊಳಿಸಿಕೊಳ್ಳುತ್ತಿದೆ ಎಂದು ಹೇಳಿದರು.

ಇಂಗ್ಲಿಷ್ ಅನ್ನು ರಬ್ಬರ್ ಬ್ಯಾಂಡ್ ಆಗಿಸಿ ಕನ್ನಡಕ್ಕೆ ಬಾಗಿಸಿ, ನಮ್ಮ ಭಾಷೆಯ ಲಯ, ಸಂಗೀತವನ್ನು ತಿಳಿಸಬೇಕು. ಇದನ್ನೆ ನಾನು ಹಾರ್ಟ್ ಲ್ಯಾಂಪ್ ಅನುವಾದಕ್ಕೆ ಬಳಸಿದ್ದು. ಅನುವಾದ ಎಂಬುದು ಭಾಷೆಯ ಬೆಳವಣಿಗೆಗೆ ಬಹುಮುಖ್ಯ. ಇದರಿಂದ ಕನ್ನಡಕ್ಕೆ ಹೊಸ ಶಕ್ತಿ ಬಂದಂತೆ ಆಗುತ್ತದೆ. ಕನ್ನಡಕ್ಕೆ ಸಿಕ್ಕಿರುವ ಈ ಪ್ರಶಸ್ತಿಯ ಸಂಭ್ರಮ ಒಂದು ಕಾರ್ಯಕ್ರಮವಾಗಿ ಇರಬಾರದು ಎಂದು ಅವರು ತಿಳಿಸಿದರು.

ನಮ್ಮ ರಾಜ್ಯದಲ್ಲಿರುವ ಇನ್ನೂ ಅನೇಕ ಭಾಷೆಗಳ ಬಗ್ಗೆ ಚರ್ಚೆಯಾಗಬೇಕು. ನಮ್ಮ ಭಾಷೆ, ನಮ್ಮ ಹಕ್ಕು ಅದನ್ನು ಯಾರು ಕಿತ್ತುಕೊಳ್ಳಲು ಆಗುವುದಿಲ್ಲ. ಅನುವಾದ ಎಂಬ ಪ್ರಕ್ರಿಯೆ ಮೂಲಕ ಭಾಷೆಗಳು ಪರಸ್ಪರ ಮಾತನಾಡುತ್ತಿರಬೇಕು. ಆಗ ಮಾತ್ರ ನಮ್ಮ ಭಾಷೆಗಳು ಉಳಿಯುತ್ತವೆ, ಬೆಳೆಯುತ್ತವೆ, ಕನ್ನಡ ಭಾಷೆಯ ಬಗೆಗಿನ ನಮ್ಮ ಪ್ರೀತಿ ಈ ಕೊಡು ಕೊಳ್ಳುವಿಕೆ ಮೂಲಕ ಉಳಿದು ಬೆಳೆದರೆ ಮಾತ್ರ ಈ ನಮ್ಮ ಅಂತರ್‌ ರಾಷ್ಟ್ರೀಯ ಬೂಕರ್ ಪ್ರಶಸ್ತಿಯ ಗೆಲುವಿಗೆ ಅರ್ಥ ಬರುತ್ತದೆ ಎಂದು ದೀಪಾ ಭಸ್ತಿ ಅಭಿಪ್ರಾಯಪಟ್ಟರು.

ಅಭಿನಂದನಾ ನುಡಿಗಳನ್ನಾಡಿದ ಮುಖ್ಯಮಂತ್ರಿಯ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಅಂತರ್‌ ರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ಹಾಗೂ ಅನುವಾದಕಿ ದೀಪಾ ಭಸ್ತಿಯನ್ನು ಸನ್ಮಾನಿಸುವ ಮೂಲಕ ಕನ್ನಡಿಗರಾದ ನಾವು ನಮ್ಮನ್ನು ನಾವೇ ಗೌರವಿಸಿಕೊಳ್ಳುತ್ತಿದ್ದೇವೆ. ಅದಕ್ಕಿಂತ ಹೆಚ್ಚಾಗಿ ನಾವು 1500 ವರ್ಷಕ್ಕೂ ಹೆಚ್ಚು ಪ್ರಾಚೀನವಾದ ಕನ್ನಡ ಭಾಷೆಯನ್ನು ಗೌರವಿಸುತ್ತಿದ್ದೇವೆ ಎಂದರು.

ಕನ್ನಡದ ಮೊದಲನೆ ಶಿಲಾ ಶಾಸನ ಕ್ರಿ.ಶ.450ರಲ್ಲಿ ಹಾಸನ ಜಿಲ್ಲೆಯ ಹಲ್ಮಿಡಿಯಲ್ಲಿ ಕಂಡು ಬಂದಿದೆ. ಅದು ಕನ್ನಡದ ಮೊದಲನೆ ರಾಜವಂಶ ಕದಂಬರ ಕಾಲದ್ದು, ಬಾನು ಮುಷ್ತಾಕ್ ಅವರು ಕೂಡ ಅದೇ ಜಿಲ್ಲೆಯವರು. ಬಾನು ಮುಷ್ತಾಕ್ ಕೇವಲ ವಿಶ್ವವಿದ್ಯಾಲಯದ ವೇದಿಕೆಗಳಿಗೆ ಬರೆಯುತ್ತಾ, ಬೌದ್ಧಿಕ ವಲಯದ ಓದುಗರನ್ನು ಮೆಚ್ಚಿಸುವವರಲ್ಲ. ಜಗತ್ತಿನಲ್ಲಿರುವ ಮಹಿಳಾ ಕುಲದ ನೋವನ್ನು, ಬದುಕಿನ ಅನುಭವವನ್ನು ಸಮಾಜದ ಮುಂದೆ ಇರಿಸುವವರು ಎಂದು ಅವರು ಹೇಳಿದರು.

ಪತ್ರಕರ್ತೆ, ವಕೀಲೆ, ಸಾಮಾಜಿಕ ಕಾರ್ಯಕರ್ತೆ, ಮುಸ್ಲಿಮ್ ಮಹಿಳೆಯಾಗಿ ಬದುಕಿನ ಪ್ರತಿಯೊಂದು ಹೆಜ್ಜೆಯಲ್ಲಿಯೂ ತನಗೆ ಎದುರಾದ ಸವಾಲುಗಳಿಗೆ ಪ್ರತಿರೋಧ ಒಡ್ಡಿದವರು. ಸಮಾಜದಲ್ಲಿರುವ ಪುರುಷ ಪ್ರಧಾನ ಯಜಮಾನಿಕೆಯನ್ನು ಎದುರಿಸಿ ನಿಂತವರು. ಹೆಣ್ಣಿನ ಶೋಷಣೆ, ದಬ್ಬಾಳಿಕೆ, ನೋವು, ವಿಷಾದವನ್ನು, ಪುರುಷ ಪ್ರಾಧಾನ್ಯತೆಯ ದಬ್ಬಾಳಿಕೆನನ್ನು ಕಟಕಟೆಯಲ್ಲಿ ನಿಲ್ಲಿಸಿದವರು ಎಂದು ಅತೀಕ್ ತಿಳಿಸಿದರು.

ಬಾನು ಮುಷ್ತಾಕ್ ನಾಲ್ಕು ಗೋಡೆಗಳ ಮಧ್ಯೆ ಕೂತು ಕತೆಗಳನ್ನು ಬರೆದವರಲ್ಲ. ಬಡವರ ಜೊತೆ ಮಾತನಾಡುವಾಗ ಅವರಿಗೆ ಆದ ಅನುಭವಗಳನ್ನು ಇಡೀ ಪ್ರಪಂಚಕ್ಕೆ ತೆಗೆದುಕೊಂಡು ಹೋದವರು. ಇವರಲ್ಲಿನ ಕತೆಗಳು ಕೇವಲ ಮುಸ್ಲಿಮ್ ಸಮುದಾಯದ ಹೆಣ್ಣು ಮಕ್ಕಳ ಕತೆಗಳಲ್ಲ. ಎಲ್ಲ ಧರ್ಮದಲ್ಲಿರುವ ಮಹಿಳೆಯರು ಎದುರಿಸುತ್ತಿರುವ ಸವಾಲು, ಸಮಸ್ಯೆಗಳ ಕತೆಯಾಗಿದೆ. ನಾನು ಹಾಸನ ಜಿಲ್ಲಾಧಿಕಾರಿಯಾಗಿದ್ದಾಗ ಅವರು ಡಿಸಿ ನ್ಯಾಯಾಲಯಕ್ಕೆ ವಕೀಲರಾಗಿ ಬರುತ್ತಿದ್ದರು. ಅವರ ಸಾಮಾಜಿಕ ಚಿಂತನೆ, ಬಡವರ ಕಾಳಜಿ, ಸಮಾನತೆ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಕೆಲಸ ನೋಡಿದ್ದೇನೆ. ಬಾನು ಮುಷ್ತಾಕ್ ಬಂಡಾಯ ಸಾಹಿತ್ಯದ ಭಾಗವಾಗಿದ್ದರು. ಇಂದು ಕನ್ನಡ ಸಾಂಸ್ಕೃತಿಕ ಪರಂಪರೆಗೆ ಅಂತರ್‌ ರಾಷ್ಟ್ರೀಯ ಪ್ರಶಸ್ತಿ ತಂದು ಕೊಟ್ಟಿದ್ದಾರೆ ಎಂದು ಅತೀಕ್ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಗೌರವ ನನ್ನ ತಾಯಿಯ ಮಡಿಲಲ್ಲಿ ನಾನು ಕೇಳಿದ ಮೊದಲ ಕತೆಗಾಗಿ, ನನ್ನ ಪ್ರೀತಿಯ ಅಪ್ಪನ ಒತ್ತಾಸೆಗಾಗಿ, ನನ್ನ ಗುರುಗಳಿಗೆ ನನ್ನಲ್ಲಿ ಅಡಗಿದ್ದ ಕತೆ ಹೇಳು ಎಂಬ ಪ್ರಕಾಶವನ್ನು ಬೆಳಗಿಸಿದಕ್ಕಾಗಿ, ಈ ನಾಡಿನ ಅನಾಮಧೇಯ ಕವಿಗಳು, ಕತೆಗಾರರು ಎಲ್ಲರೂ ಈ ಬಹುಮಾನದ ಸಹ ವಿಜೇತರು. ಕರ್ನಾಟಕದ ಅಗಣಿತ ಅಜ್ಞಾತ ಕಂಠಗಳು, ಮಹಿಳೆಯರು, ನೇಕಾರರು, ಕಲಾವಿದರು, ದಿನನಿತ್ಯದ ಕನಸುಗಾರರು ಎಲ್ಲರ ಜೀವನ, ಸಂಘರ್ಷಗಳು, ನನ್ನ ಕೃತಿಗಳಲ್ಲಿ ಸ್ಥಾನ ಪಡೆದಿವೆ.

-ಬಾನು ಮುಷ್ತಾಕ್, ಅಂತರ್‌ ರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ

ಬಾನು ಮುಷ್ತಾಕ್ ಹಾಗೂ ದೀಪಾ ಭಸ್ತಿ ವಿಶ್ವ ಮಟ್ಟದಲ್ಲಿ ನಮ್ಮ ಕನ್ನಡದ ರಾಯಭಾರಿಗಳಾಗಿದ್ದಾರೆ. ಬೂಕರ್ ಪ್ರಶಸ್ತಿ ಪಡೆಯುವ ಮೂಲಕ ಕನ್ನಡ ಜ್ಯೋತಿ ಬೆಳಗಿಸಿ, ಕನ್ನಡ ಉಳಿಸಿದ್ದಾರೆ. ಕನ್ನಡದ ಭಾರತಿ, ದೇಶಕ್ಕೆ ಆರತಿಯಾಗಿದ್ದಾಳೆ. ಸಪ್ತ ಸಾಗರದಾಚೆ ಕನ್ನಡಕ್ಕೆ ಗೌರವ ತಂದಿದ್ದಾರೆ. ನಮ್ಮ ದೇಶದಲ್ಲಿ 780 ಭಾಷೆಗಳು, 19,500 ಉಪ ಭಾಷೆಗಳಿವೆ. ಪ್ರಪಂಚದಲ್ಲಿ ಸುಮಾರು 78 ಸಾವಿರ ಭಾಷೆಗಳಿವೆ ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬರಿಗೂ ಅವರ ಭಾಷೆ, ಸಂಸ್ಕೃತಿ ಎಲ್ಲವೂ ಮುಖ್ಯ.

-ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X