25 ವರ್ಷಗಳ ಹಿಂದೆಯೇ ಬಾನು ಮುಷ್ತಾಕ್ ಅವರ ನಾಟಕಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ ಬಂದಿತ್ತು!

ಬೆಂಗಳೂರು: ಕನ್ನಡದ ಖ್ಯಾತ ಲೇಖಕಿ ಬಾನು ಮುಷ್ತಾಕ್ ಅವರಿಗೆ 2025ನೇ ಸಾಲಿನ ಪ್ರತಿಷ್ಠಿತ ಇಂಟರ್ ನ್ಯಾಷನಲ್ ಬೂಕರ್ ಪ್ರಶಸ್ತಿ ಬಂದಿದೆ. ಈ ಸಂದರ್ಭದಲ್ಲಿ, 25 ವರ್ಷಗಳ ಹಿಂದೆಯೇ ಅವರ ನಾಟಕಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ ದೊರಕಿತ್ತು ಎಂದು ಬೆಂಗಳೂರು ಆಕಾಶವಾಣಿಯ ವಾಣಿಜ್ಯ ವಿಭಾಗದ ಅಂದಿನ ನಿರ್ದೇಶಕ ಜಿ ಎಂ ಶಿರಹಟ್ಟಿ ನೆನಪಿಸಿಕೊಂಡಿದ್ದಾರೆ.
ಸುಮಾರು 25 ವರುಷಗಳ ಹಿಂದೆ ಬಾನು ಮುಷ್ತಾಕ್ ಅವರು ಬರೆದ "ಒಮ್ಮೆ ಹೆಣ್ಣಾಗು ಪ್ರಭುವೆ" ಎಂಬ ಸ್ವಾಗತ ಕಥೆಯನ್ನು ಬಾನುಲಿ ನಾಟಕವಾಗಿ ರೂಪಾಂತರಿಸಿ (ಪ್ರೆಯರ್ ಪ್ಲೇ) ಅಂತರರಾಷ್ಟ್ರೀಯ ಟಿ.ವಿ.ಕಿಡಿಯೋ ಸಂಸ್ಥೆಯ ವಾರ್ಷಿಕ ಸ್ಪರ್ಧೆಗೆ ಕಳುಹಿಸಲಾಗಿತ್ತು. ಅನುವಾದಿಸಿ ʼಓ ಗಾಡ್ ಬಿ ವನ್ಸ್ ಎ ವುಮನ್ʼ ಎಂಬ ಹೆಸರಿನಲ್ಲಿ ಕಳುಹಿಸಲಾದ ಪ್ರೆಯರ್ ಪ್ಲೇಗೆ ಅಂತರರಾಷ್ಟ್ರೀಯ ಪ್ರಶಸ್ತಿ ದೊರಕಿತ್ತು. ಬಾನು ಮುಷ್ತಾಕ್ ಅವರ ಈ ಕಥೆಯನ್ನು ಬಾನುಲಿ ನಾಟಕವನ್ನಾಗಿ ರೂಪಾಂತರಿಸಿ ಅಂತರರಾಷ್ಟ್ರೀಯ ಮಾಧ್ಯಮ 25 ವರ್ಷಗಳ ಹಿಂದೆಯೇ ಪರಿಚಯಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಜಿ.ಎಂ.ಶಿರಹಟ್ಟಿ ಅವರೇ ಈ ಕಥೆಯನ್ನು ಸ್ವಾಗತ ಪ್ರಾರ್ಥನಾ ಬಾನುಲಿ ನಾಟಕವನ್ನಾಗಿ ರೂಪಾಂತರಿಸಿದ್ದರು. ಮೈತ್ರೇಯಿ ಜಹಗೀರದಾರ ಅವರು ಈ ನಾಟಕವನ್ನು ನಿರ್ಮಿಸಿದ್ದರು. ಅಂತರರಾರಾಷ್ಟ್ರೀಯ ಪ್ರಶಸ್ತಿ ಬಂದಾಗ ಬಾನು ಮುಷ್ತಾಕ್ ಅವರನ್ನು ಆಕಾಶವಾಣಿ ಬಳಗದ ಪರವಾಗಿ ಸತ್ಕರಿಸಲಾಗಿತ್ತು ಎಂದು ಜಿ ಎಂ ಶಿರಹಟ್ಟಿ ಹೇಳಿದ್ದಾರೆ.





