ಆ.14ರಂದು ಬಡವರ ಭವಿಷ್ಯಕ್ಕಾಗಿ ‘ಬರಿಹೊಟ್ಟೆ ಸತ್ಯಾಗ್ರಹ’

ಬೆಂಗಳೂರು, ಆ. 12: ‘ಜಮೀನು, ಮನೆ, ನಿವೇಶನ ಹಾಗೂ ಅರಣ್ಯ ಹಕ್ಕುಗಳಿಗಾಗಿ ಅನೇಕ ಮನವಿಗಳನ್ನು ಸರಕಾರಕ್ಕೆ ಸಲ್ಲಿಸಿದರೂ, ಯಾವುದೇ ಪ್ರಯೋಜನೆ ಆಗಿಲ್ಲ. ಹಾಗಾಗಿ ಆ.14ರಂದು ನಗರದ ಫ್ರೀಡಂ ಪಾರ್ಕ್‍ನಲ್ಲಿ ಬಡವರ ಭವಿಷ್ಯಕ್ಕಾಗಿ ಬರಿಹೊಟ್ಟೆ ಸತ್ಯಾಗ್ರಹವನ್ನು ಆರಂಭಿಸಲಾಗಿದೆ’ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ತಿಳಿಸಿದೆ.
ಶನಿವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಮುಖ್ಯಸ್ಥೆ ಬಿ.ಟಿ. ಲಲಿತಾನಾಯ್ಕ್ ಮಾತನಾಡಿ, ‘ಬಡವರಿಗೆ ನಿವೇಶನಗಳನ್ನು ನೀಡುವ ಸಲುವಾಗಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕಂದಾಯ, ಅರಣ್ಯ, ವಸತಿ ಹಾಗೂ ಗ್ರಾಮೀಣಾಭಿವೃದ್ಧಿ ಮಂತ್ರಿಗಳು ಹಾಗೂ ಸಮಿತಿಯ ಪ್ರತಿನಿಧಿಗಳನ್ನು ಒಳಗೊಂಡಂತೆ ಉನ್ನತ ಮಟ್ಟದ ಸಭೆ ನಡೆಸಬೇಕು’ ಎಂದು ಮನವಿ ಮಾಡಿದರು.
ಭೂಮಿ, ಮನೆ ಮತ್ತು ನಿವೇಶನಗಳ ಮಂಜೂರಾತಿಯನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕು. ಕಾಲಮಿತಿಯೊಳಗೆ ಇದನ್ನು ಜಾರಿಗೊಳಿಸಲು ‘ಹೈ ಪವರ್ ಕಮಿಟಿ’ಯನ್ನು ರಚಿಸಬೇಕು. ಈ ಹಿಂದಿನಂತೆ ಇದರಲ್ಲಿ ಹೋರಾಟದ ಪ್ರತಿನಿಧಿಗಳೂ ಇರಬೇಕು. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಭೂ ಮಂಜೂರಾತಿ ಸಮಿರಿಗಳನ್ನು ಕೂಡಲೇ ರಚಿಸಬೇಕು. ಈ ಸಮಿತಿಗಳಲ್ಲಿ ಭೂಮಿ-ವಸತಿ ಹೋರಾಟದ ಪ್ರತಿನಿಧಿಯೂ ಇರಬೇಕು ಎಂದರು.
ಭೂಮಿ-ಮನೆ ಮಂಜೂರಾತಿಯ ಪ್ರಕ್ರಿಯೆಯನ್ನು ಸರಳ ಹಾಗೂ ತ್ವರಿತಗೊಳಿಸಬೇಕು. ಅರ್ಜಿ ಸಲ್ಲಿಸಿ ಉಳುತ್ತಿರುವ ಭೂಮಿಗೆ ಮತ್ತು ವಾಸಿಸು6ತ್ತಿರುವ ಮನೆಗೆ ತಡಮಾಡದೆ ಹಕ್ಕು ಪತ್ರ ನೀಡುವಂತಹ ಪದ್ಧತಿಯನ್ನುಉ ಜಾರಿಗೆ ತರಬೇಕು. ರೈತರು ಮತ್ತು ಹೋರಾಟಗಾರರ ಮೇಲೆ ಅರಣ್ಯ ಮತ್ತು ಕಂದಾಯ ಇಲಾಖೆಗಳು ಮತ್ತು ಪೊಲೀಸರು ದಾಖಲಿಸಿರುವ ಕೇಸುಗಳನ್ನು ವಾಪಾಸ್ ತೆಗೆಯಬೇಕು ಎಂದು ಅವರು ಒತ್ತಾಯಿಸಿದರು.
ಯಾವುದೇ ಸರಕಾರಿ ಅಥವಾ ಅರಣ್ಯ ಭೂಮಿಯಲ್ಲಿ 5 ಎಕರೆಗಿಂತ ಕಡಿಮೆ ಸಾಗುವಳಿ ಇಲ್ಲವೇ ಒತ್ತುವರಿ ಮಾಡಿಕೊಂಡಿರುವ ಯಾವುದೇ ಅರ್ಜಿದಾರರನ್ನು ಪರ್ಯಾಯ ಒದಗಿಸದೆ ತೆರವುಗೊಳೀಸಬಾರದು. ಶ್ರೀಮಂತರು ಮಾಡಿರುವ ಒತ್ತುವರಿಯನ್ನು ತೆರವುಗೊಳಿಸಿ ಭೂ ರಹಿತರಿಗೆ ಭೂಮಿ ಮತ್ತು ನಿವೇಶನಗಳನ್ನು ಹಂಚಬೇಕು ಎಂದು ಅವರು ಹೇಳಿದರು.
ಸಮಿತಿಯ ಪದಾಧಿಕಾರಿಗಳಾದ ಕುಮಾರ್ ಸಮತಳ, ಡಿ.ಎಚ್.ಪೂಜಾರ್, ಸ್ವರ್ಣಭಟ್, ಕೆ.ಮರಿಯಪ್ಪ, ಸಿರಿಮನೆ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.







