ಕೂಡಲ ಸಂಗಮ ಪಂಚಮಸಾಲಿ ಪೀಠದಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಉಚ್ಛಾಟನೆ

ಬಸವ ಜಯ ಮೃತ್ಯುಂಜಯ ಸ್ವಾಮೀಜಿ
ಬಾಗಲಕೋಟೆ, ಸೆ. 21: ಲಿಂಗಾಯತ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯ ಮೃತ್ಯುಂಜಯ ಸ್ವಾಮೀಜಿಯನ್ನು ಉಚ್ಛಾಟಿಸಲು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ನ ಕಾರ್ಯಕಾರಿಣಿ ಸಭೆ ನಿರ್ಧರಿಸಿದೆ.
ರವಿವಾರ ಕೂಡಲ ಸಂಗಮದಲ್ಲಿ ನಡೆದ ಟ್ರಸ್ಟ್ನ ಕಾರ್ಯಕಾರಿಣಿ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸಲಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ಲಿಂಗಾಯತ ಎಂದು ಬರೆಸುವಂತೆ ಹುಬ್ಬಳ್ಳಿಯಲ್ಲಿ ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ಬಸವ ಜಯಮೃತ್ಯುಂಜಯ ಸ್ವಾಮಿ ಹೇಳಿದ್ದಾರೆ. ಇದು ನಮ್ಮ ಮೀಸಲಾತಿ ಹೋರಾಟ ಹತ್ತಿಕ್ಕುವ ತಂತ್ರವಾಗಿದೆ ಎಂದು ಹೇಳಿದರು.
ಇಂತಹ ಹೇಳಿಕೆ ನೀಡಲು ಸ್ವಾಮೀಜಿಗೆ ರಾಜಕೀಯ ಒತ್ತಡಗಳಿರಬಹುದು. ಆದರೆ, ಹಿಂದೂ ಧರ್ಮದಲ್ಲಿನ ಅಸಮಾನತೆಯನ್ನು ವಿರೋಧಿಸಿ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದು, ಸ್ವಾಮೀಜಿಯ ನಿಲುವು ಬಸವ ತತ್ವಕ್ಕೆ ವಿರುದ್ಧವಾಗಿರುವುದರಿಂದ ಅವರನ್ನು ಪೀಠದಿಂದ ಉಚ್ಛಾಟನೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು ಮುಂದೆ ಲಿಂಗಾಯತ ಪಂಚಮಸಾಲಿ ಪೀಠಕ್ಕೂ ಅವರಿಗೂ ಸಂಬಂಧವಿಲ್ಲ ಎಂದು ನೀಲಕಂಠ ಅಸೂಟಿ ತಿಳಿಸಿದರು.
ನಮ್ಮ ಟ್ರಸ್ಟ್ ನ ಬೈಲಾದಲ್ಲಿ ಸ್ವಾಮೀಜಿ ಆಗುವವರು ಸ್ವಂತ ಆಸ್ತಿ ಮಾಡಬಾರದು. ಸಮಾಜವನ್ನು ಒಂದು ಗೂಡಿಸುವ ಕೆಲಸ ಮಾಡಬೇಕೆ ಹೊರತು, ಒಡೆಯುವ ಕೆಲಸ ಮಾಡಬಾರದು ಎಂದು ತಿಳಿಸಲಾಗಿದೆ. ಆದರೆ, ಅವರು ಆಸ್ತಿಯನ್ನು ಮಾಡಿದ್ದಾರೆ. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆಯೂ ಅವರ ವಿರುದ್ಧ ಅನೇಕ ದೂರುಗಳು ಬಂದಿವೆ ಎಂದು ನೀಲಕಂಠ ಅಸೂಟಿ ಹೇಳಿದರು.
2014ರಲ್ಲಿಯೂ ಅವರಿಗೆ ನೋಟಿಸ್ ನೀಡಿ, ತಪ್ಪುಗಳನ್ನು ತಿದ್ದಿಕೊಳ್ಳುವಂತೆ ತಿಳಿಸಿದ್ದೆವು. ಆದರೆ, ಅವರು ತಮ್ಮ ಪ್ರವೃತ್ತಿಯನ್ನು ಬದಲಾಯಿಸಿಕೊಂಡಿಲ್ಲ. ನಮ್ಮ ಟ್ರಸ್ಟಿನಲ್ಲಿ 30 ಜನ ಸದಸ್ಯರಿದ್ದಾರೆ. ಟ್ರಸ್ಟ್ ನ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಪರಿಷತ್ ಮಾಜಿ ಸದಸ್ಯ ಎಂ.ಪಿ.ನಾಡಗೌಡ ಸೇರಿದಂತೆ ಹಲವರು ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ, ಸಮಾಜಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಿ, ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ಅವರು ತಿಳಿಸಿದರು.
ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಸ್ವಾಮೀಜಿ ವೈಯಕ್ತಿಕವಾಗಿ ಯಾವುದೇ ಆಸ್ತಿ ಮಾಡಿಕೊಳ್ಳಬಾರದು ಎಂದು ನಮ್ಮ ಬೈಲಾದಲ್ಲಿದೆ. ಆದರೆ, ಅವರು ಬೆಳಗಾವಿ, ಹುಬ್ಬಳ್ಳಿ, ಬೆಂಗಳೂರಿನಲ್ಲಿ ಮನೆ ಮಾಡಿಕೊಂಡಿದ್ದಾರೆ. ಅವರ ಹೆಸರಿನಲ್ಲಿ ಆಸ್ತಿ ಮಾಡಿಕೊಂಡಿದ್ದಾರೆ. ಸಮಯ ಬಂದಾಗ ಎಲ್ಲ ವಿವರಗಳನ್ನು ಬಹಿರಂಗ ಪಡಿಸುತ್ತೇನೆ ಎಂದು ಹೇಳಿದರು.
ಇನ್ನು ಹತ್ತು ಹಲವಾರು ಗಂಭೀರ ಆರೋಪಗಳು ಸ್ವಾಮೀಜಿ ಮೇಲೆ ಕಂಡು ಬಂದಿದೆ. ಆದುದರಿಂದ, ಅವರನ್ನು ಮಠದಿಂದ ಉಚ್ಚಾಟನೆ ಮಾಡಲಾಗಿದೆ. ಜೊತೆಗೆ ನಾಳೆಯಿಂದ ಇಲ್ಲಿ ದಾಸೋಹ, ಸಮುದಾಯದ ಕಾರ್ಯಗಳಿಗೆ ಅನುಕೂಲ ಆಗುವಂತೆ ಕಲ್ಯಾಣ ಮಂಟಪ ನಿರ್ಮಿಸಿ ಮುಂಬರುವ ದಿನಗಳಲ್ಲಿ ಪೀಠಕ್ಕೆ ಮತ್ತೊಬ್ಬ ಶ್ರೀ ಗಳನ್ನು ನೇಮಿಸಲಾಗುವುದು ಎಂದು ಅವರು ಹೇಳಿದರು.







