‘ಬಸವ ಮಂಟಪ’ ಕೃತಿ ಮುಟ್ಟುಗೋಲು; ರವಿ ಹಂಜ್, ವಿಶ್ವೇಶ್ವರ ಭಟ್ ವಿರುದ್ಧ ಕಾನೂನು ಕ್ರಮ : ಸಂಪುಟ ಸಭೆ ನಿರ್ಣಯ

ಡಾ.ಜಿ. ಪರಮೇಶ್ವರ್
ಬೆಂಗಳೂರು : ರಾಜ್ಯದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಬಗ್ಗೆ ಅವಹೇಳನಕಾರಿ ಶಬ್ಧ ಬಳಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಸಂಶೋಧಕ ರವಿ ಹಂಜ್ ಬರೆದಿರುವ ‘ಬಸವ ಮಂಟಪ’ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ರವಿ ಹಂಜ್ ಮತ್ತು ಪತ್ರಕರ್ತ ವಿಶ್ವೇಶ್ವರ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಮಾಹಿತಿ ನೀಡಿದರು.
ಬಸವ ಮಂಟಪ ಕೃತಿಗೆ ಸಂಬಂಧಿಸಿದಂತೆ ಬಸವ ಸಮಿತಿಯವರು ಮುಖ್ಯಮಂತ್ರಿಗೆ ದೂರು ನೀಡಿದ್ದರು. ಅದರ ಆಧಾರದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ಮಾಡಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆಗೆ ಒತ್ತು ನೀಡಲು, ಕೃಷಿ ತಂತ್ರಜ್ಞಾನಗಳ ಮಾರುಕಟ್ಟೆ ಸಂಪರ್ಕ ಬಲಪಡಿಸಲು ಮುಂದಿನ ಮೂರು ವರ್ಷಗಳಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ‘ಮುಖ್ಯಮಂತ್ರಿ ಕೃಷಿ ವಿಸ್ತಾರ' ಯೋಜನೆ ಜಾರಿಗೆ ನಿರ್ಧರಿಸಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಉಪ್ಪಾರ ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ, ಸವಿತಾ ಸಮಾಜ ಅಭಿವೃದ್ಧಿ ನಿಗಮ, ಅಲೆಮಾರಿ ಅರೆಅಲೆಮಾರಿ ಅಭಿವೃದ್ಧಿ ನಿಗಮ ಹಾಗೂ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಡಿ 2013-14 ರಿಂದ 2020-21ರವರೆಗೆ ವಿವಿಧ ಯೋಜನೆಯಡಿ 977 ಕೋಟಿ ರೂ.ಸಾಲ ನೀಡಲಾಗಿತ್ತು ಎಂದು ಅವರು ಹೇಳಿದರು.
ಬಹುತೇಕ ಫಲಾನುಭವಿಗಳು ಸಾಲ ಮರು ಪಾವತಿ ಮಾಡಿಲ್ಲ. ಅದರ ಬಡ್ಡಿಯೇ 236 ಕೋಟಿ ರೂ. ಆಗಿದೆ. ಒಂದಾವರ್ತಿ ತಿರುವಳಿ ಯೋಜನೆಯಡಿ 6 ತಿಂಗಳ ಒಳಗಾಗಿ ಫಲಾನುಭವಿಗಳು ಅಸಲು ಪಾವತಿ ಮಾಡಿದರೆ, ಅವರಿಗೆ ಬಡ್ಡಿ ಮನ್ನಾ ಆಗಲಿದೆ ಎಂದು ಪರಮೇಶ್ವರ್ ತಿಳಿಸಿದರು.
ಕೆಪಿಎಸ್ಸಿ ಸದಸ್ಯೆ ಬಿ.ವಿ.ಗೀತಾ ಅವರನ್ನು ಭ್ರಷ್ಟಾಚಾರ ಮತ್ತು ಅಧಿಕಾರ ದುರ್ಬಳಕೆ ಆರೋಪಗಳ ಹಿನ್ನೆಲೆಯಲ್ಲಿ ಅಮಾನತುಗೊಳಿಸಲು ಹಾಗೂ ಮುಂದಿನ ವಿಚಾರಣೆ ನಡೆಸಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ಸಚಿವ ಸಂಪುಟ ನಿರ್ಧರಿಸಿದೆ.
ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ 15 ಹಾಸಿಗೆಗಳ ಸುಟ್ಟಗಾಯಗಳ ಚಿಕಿತ್ಸಾ ವಾರ್ಡ್ಗಳನ್ನು ಸ್ಥಾಪಿಸಲು ಹಾಗೂ ಬೆಂಗಳೂರಿನ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಮಹಾಬೋಧಿ ಸುಟ್ಟ ಗಾಯಗಳ ಚಿಕಿತ್ಸಾ ಕೇಂದ್ರದಲ್ಲಿ ಅತ್ಯಾಧುನಿಕ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪನೆ ಮಾಡಲು 105.45 ಕೋಟಿ ರೂ.ಗಳು, ಸೆಂಟರ್ ಆಫ್ ಎಕ್ಸಲೆನ್ಸ್ ನಿರ್ವಹಣೆಗೆ ವಾರ್ಷಿಕ 1.20 ಕೋಟಿ ರೂ. ಒದಗಿಸಲು ಅನುಮೊದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.
ಇತರ ನಿರ್ಣಯಗಳು: ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ 52-54 ಮೀಟರ್ ಎತ್ತರ ತಲುಪಬಲ್ಲ ಏರಿಯಲ್ ಲ್ಯಾಡರ್ ಪ್ಲಾಟ್ಫಾರ್ಮ್ ವಾಹನವನ್ನು 16 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಖರೀದಿಸಲು, ಹಾಸನ ವಿಮಾನ ನಿಲ್ದಾಣ ಕಾಮಗಾರಿಗೆ 192 ಕೋಟಿ ರೂ. ಖರ್ಚು ಮಾಡಲಾಗಿದೆ. ಇನ್ನುಳಿದ 349 ಕೋಟಿ ರೂ.ಗಳನ್ನು ಪಾವತಿಸಲು ಸಂಪುಟ ಅನುಮೋದನೆ ನೀಡಿದೆ.
ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ತಿದ್ದುಪಡಿ ವಿಧೇಯಕ-2026, ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಮೂರನೇ ತಿದ್ದುಪಡಿ) ವಿಧೇಯಕ-2026 ಅನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ.
1,39,846 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ 27.97 ಕೋಟಿ ರೂ.ವೆಚ್ಚದಲ್ಲಿ ಸಮವಸ್ತ್ರ ಕೊಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ಕ್ಕೆ ಎರಡನೆ ತಿದ್ದುಪಡಿ ವಿಧೇಯಕ-2026 ತರಲು ಅನುಮೋದನೆ ನೀಡಲಾಗಿದೆ.
ತಿಪಟೂರು ನಗರಕ್ಕೆ ನೊಣವಿನಕೆರೆ ಮೂಲದಿಂದ ಕುಡಿಯುವ ನೀರು ಸರಬರಾಜು ಕೋಟಿಗಳ ಮಾಡುವ 39.35 ಕೋಟಿ ರೂ. ಅಂದಾಜು ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
2027ನೇ ಸಾಲಿಗೆ ಸಾರ್ವತ್ರಿಕ ರಜೆ ಹಾಗೂ ಪರಿಮಿತಿ ರಜೆಗಳನ್ನು ಘೋಷಿಸಲು ತೀರ್ಮಾನ. ಕೇಂದ್ರ ಪುರಸ್ಕೃ ತ ಪೊಲೀಸ್ ಪಡೆಗಳ ಆಧುನೀಕರಣ ಯೋಜನೆಯಡಿ ಪೊಲೀಸ್ ಇಲಾಖೆಗೆ ಅವಶ್ಯವಿರುವ 134 ಇಆರ್ಎಸ್ಎಸ್ ವಾಹನಗಳನ್ನು 11 ಕೋಟಿ ರೂ. ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ.
The Karnataka Disposal of Property (Order for custody and disposal of property pending trial in certain cases) Rules, 2026ಕ್ಕೆ ಅನುಮೋದನೆ.
ಕರ್ನಾಟಕ ವಿದ್ಯುತ್ ಬಸ್ ಕಾರ್ಯಕ್ರಮ ಯೋಜನೆಯನ್ನು ವಿಶ್ವಬ್ಯಾಂಕ್ನ ಸಹಯೋಗದೊಂದಿಗೆ 1700 ಕೋಟಿ ರೂ. ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ.
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು 26 ಸಂಶೋಧನಾ ಸಂಸ್ಥೆಯ ಹುಬ್ಬಳ್ಳಿಯ ಹೃದ್ರೋಗ ಕೇಂದ್ರಕ್ಕೆ ಅವಶ್ಯಕ ವಿರುವ ಹೆಚ್ಚುವರಿ ಉಪಕರಣಗಳನ್ನು 36.59 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ.
ಭಾರತ್ ಜೋಡೊ ಯುವ ಸಂಘ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಮಟ್ಟದ ಯುವ ಸಮಿತಿಯನ್ನು ರಚಿಸುವ ಬಗ್ಗೆ ಹಾಗೂ ಪೂರ್ಣಾವಧಿ ಸಂಯೋಜಕರು ಮತ್ತು ಪ್ರೇರಕರನ್ನು ನೇಮಿಸಲು ಅನುಮೋದನೆ.
ರಾಜ್ಯದ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿ ಆಧರಿತ ನಿರ್ಮಾಣ ಒಂದು ಲಕ್ಷ ಹೊಸ ಮನೆಗಳ ಗುರಿಯನ್ನು ಮೊತ್ತದಲ್ಲಿ ಅನುಷ್ಠಾನ ಗೊಳಿಸಲು 2,241 ಕೋಟಿಗಳ ಅಂದಾಜಿಗೆ ಅನುಮೋದನೆ. ಮುಖ್ಯಮಂತ್ರಿಗಳ "ನಮ್ಮ ಮನೆ" ಯೋಜನೆಯಡಿಯಲ್ಲಿ ರಾಜ್ಯದಾದ್ಯಂತ ಜಮೀನಿನ ಲಭ್ಯತೆಗೆ ಅನುಗುಣವಾಗಿ 11,650 ಕೋಟಿ ರೂ.ವೆಚ್ಚದಲ್ಲಿ ಒಟ್ಟು 93,240 ನಿವೇಶನಗಳನ್ನು ಒದಗಿಸುವ ಕಾರ್ಯ ಕ್ರಮವನ್ನು ಅನುಷ್ಠಾನ ಗೊಳಿಸಲು ಹಾಗೂ ಅದರಲ್ಲಿ ಸಮುದಾಯದ ಶ್ರಮಿಕರಿಗೆ ಶೇ.50ರ ರಿಯಾಯಿತಿ ದರದಲ್ಲಿ 50 ಸಾವಿರ ನಿವೇಶನಗಳನ್ನು 2,914 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನ ಗೊಳಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
2026-27ನೆ ಸಾಲಿನ ಆಯವ್ಯಯ ಘೋಷಣೆಯಂತೆ ಅಲ್ಪಸಂಖ್ಯಾತರ ಬಡ ವಿದ್ಯಾರ್ಥಿಗಳಿಗೆ ತಾಂತ್ರಿಕ ಮತ್ತು ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು 5 ಸಾವಿರ ಬಿಇ, ಬಿಸಿಎ ವಿದ್ಯಾರ್ಥಿಗಳಿಗೆ 25 ಕೋಟಿ ರೂ.ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಲ್ಯಾಪ್ಟಾಪ್ ಖರೀದಿಸಿ ವಿತರಿಸಲು ತೀರ್ಮಾನಿಸಲಾಗಿದೆ.
ಕೆಶಿಪ್-IV ಯೋಜನೆ ಅಡಿಯಲ್ಲಿ 9 ರಸ್ತೆಗಳ ಒಟ್ಟಾರೆ 730.01 ಕಿ.ಮೀ.ಉದ್ದದ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳನ್ನು ಏಷಿಯನ್ ಡೆವಲಪ್ ಮೆಂಟ್ ಬ್ಯಾಂಕ್ (ಎಡಿಬಿ) ನೆರವಿನೊಂದಿಗೆ 10,252.58 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
.






