ಆನಂದ್ ತೇಲ್ತುಂಬ್ಡೆ, ಡಾ. ಮಹದೇವಪ್ಪಗೆ ಬಸವ ರಾಷ್ಟ್ರೀಯ ಪುರಸ್ಕಾರ
ಮಹಾವೀರ, ಚೌಡಯ್ಯ, ಪಂಪ ಸೇರಿ ವಿವಿಧ ಪ್ರಶಸ್ತಿಗಳಿಗೆ ಆಯ್ಕೆ ಜ.31ಕ್ಕೆ ಪ್ರದಾನ: ಸಚಿವ ತಂಗಡಗಿ

ಆನಂದ್ ತೇಲ್ತುಂಬ್ಡೆ / ಡಾ. ಎನ್.ಜಿ. ಮಹದೇವಪ್ಪ
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಪ್ರತಿಷ್ಠಿತ ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಮಹಾರಾಷ್ಟ್ರದ ಖ್ಯಾತ ಲೇಖಕ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುಟುಂಬದ ಸದಸ್ಯರೂ ಆಗಿರುವ ಆನಂದ್ ತೇಲ್ತುಂಬ್ಡೆ ಅವರು ಆಯ್ಕೆಯಾಗಿದ್ದಾರೆ.
ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಬಸವ, ಮಹಾವೀರ, ಚೌಡಯ್ಯ ಹಾಗೂ ಪಂಪ ಪ್ರಶಸ್ತಿ ಸೇರಿದಂತೆ ವಿವಿಧ ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿಗಳಿಗೆ ಆಯ್ಕೆ ಸಾಧಕರನ್ನು ಆಯ್ಕೆ ಮಾಡಲಾಗಿದ್ದು, ಜ.31ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಆನಂದ್ ತೆಲ್ತುಂಬ್ಡೆ(2022-23) ಹಾಗೂ ಡಾ.ಎನ್.ಜಿ. ಮಹದೇವಪ್ಪರನ್ನು(2023-24) ಆಯ್ಕೆ ಮಾಡಲಾಗಿದೆ. ಶ್ರೀಭಗವಾನ್ ಮಹಾವೀರ ಶಾಂತಿ ಪ್ರಶಸ್ತಿಗೆ ಜಿನದತ್ತ ದೇಸಾಯಿ ಹಾಗೂ ಗುಜರಾತಿನ ಗಾಂಧಿ ಸೇವಾಶ್ರಮವನ್ನು ಆಯ್ಕೆ ಮಾಡಲಾಗಿದೆ. ಟಿ.ಚೌಡಯ್ಯ ಪ್ರಶಸ್ತಿಗೆ ನಿತ್ಯಾನಂದ ಹಳದಿಪುರ ಹಾಗೂ ಶ್ರೀರಾಮುಲು ಅವರನ್ನು ಆಯ್ಕೆ ಮಾಡಲಾಗಿದೆ. ಈ ಎಲ್ಲ ಪ್ರಶಸ್ತಿಗಳು ತಲಾ 10ಲಕ್ಷ ರೂ.ಗಳ ನಗದನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಜೊತೆಗೆ ಈ ಹಿಂದೆ ಘೋಷಣೆ ಮಾಡಲಾಗಿದ್ದ 2018-19, 2020-21, 2021-22 ಹಾಗೂ 2022-23ನೇ ಸಾಲಿನ ಪ್ರಶಸ್ತಿಗಳನ್ನೂ ಅದೇ ದಿನ ಪ್ರದಾನ ಮಾಡಲಾಗುವುದು. ನಾನಾ ಕಾರಣಗಳಿಗಾಗಿ ಈ ಪ್ರಶಸ್ತಿಗಳು ವಿತರಣೆ ಆಗಿರಲಿಲ್ಲ. ವಿತರಣೆ ಆಗದೇ ಇರುವ 31 ಪ್ರಶಸ್ತಿಗಳನ್ನು ಸೇರಿದಂತೆ ಒಟ್ಟು 75 ಮಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
2018-19ನೆ ಸಾಲಿನಲ್ಲಿ ಬಿ.ವಿ.ಕಾರಂತ ಪ್ರಶಸ್ತಿಗೆ ಭಾಜನರಾಗಿದ್ದ ಎಸ್.ಮಾಲತಿ, ಶಿವಮೊಗ್ಗ ಹಾಗೂ 2021-22ನೆ ಸಾಲಿನಲ್ಲಿ ಗುಬ್ಬಿವೀರಣ್ಣ ಪ್ರಶಸ್ತಿಗೆ ಭಾಜನರಾಗಿದ್ದ ಬಾಬಣ್ಣ ಕಲ್ಮನಿ ನಿಧನರಾಗಿದ್ದು, ಅವರ ಕುಟುಂಬ ಸದಸ್ಯರಿಗೆ ಪ್ರಶಸ್ತಿ ವಿತರಿಸಲಾಗುವುದು. ಸಂಗೊಳ್ಳಿ ರಾಯಣ್ಣ ಪ್ರಶಸ್ತಿಗೆ 2020-21ನೆ ಸಾಲಿನಲ್ಲಿ ಕೆ.ಮರುಳಸಿದ್ದಪ್ಪ, 2021-22ರಲ್ಲಿ ಹಸನ್ ನಯೀಂ ಸುರಕೋಡ, 2022-23ನೆ ಸಾಲಿನಲ್ಲಿ ಕೆ. ರಾಮಯ್ಯ, 2023-24ನೆ ಸಾಲಿನಲ್ಲಿ ವೀರಸಂಗಯ್ಯ ಆಯ್ಕೆಯಾಗಿದ್ದಾರೆ. ಅಕ್ಕಮಹಾದೇವಿ ಪ್ರಶಸ್ತಿಗೆ ಧಾರವಾಡದ ಜಗನ್ಮಾತೆ ಅಕ್ಕಮಹಾದೇವಿ ಆಶ್ರಮ ಟ್ರಸ್ಟ್, ಡಾ.ಆರ್.ಸುನಂದಮ್ಮ, ಮೀನಾಕ್ಷಿ ಬಾಳಿ, ಡಾ. ವಸುಂಧರಾ ಭೂಪತಿ, ಕನಕಶ್ರೀ ಪ್ರಶಸ್ತಿಗೆ ಡಾ.ಲಿಂಗದಹಳ್ಳಿ ಹಾಲಪ್ಪ, ಡಾ.ಬಿ.ಶಿವರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ.
ಪಂಪ ಪ್ರಶಸ್ತಿಗೆ ನಾ.ಡಿಸೋಜ, ಪ್ರೊ.ಕೆ.ಜಿ ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿಗೆ ಡಾ.ಕೆ.ವಿಶ್ವನಾಥ ಕಾರ್ನಾಡ್, ಚಂದ್ರಕಾಂತ ಪೋಕಳೆ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಬಾನು ಮುಷ್ತಾಕ್, ಎಚ್. ಎಸ್.ಮುಕ್ತಾಯಕ್ಕ, ಬಿ.ವಿ.ಕಾರಂತ ಪ್ರಶಸ್ತಿಗೆ ಸಿ.ಬಸವಲಿಂಗಯ್ಯ, ಮಂಗಳೂರಿನ ಸದಾನಂದ ಸುವರ್ಣ, ಡಾ.ಗುಬ್ಬಿವೀರಣ್ಣ ಪ್ರಶಸ್ತಿಗೆ ಚನ್ನಬಸಯ್ಯ ಗುಬ್ಬಿ, ಎಲ್.ಬಿ.ಶೇಖ ಮಾಸ್ತರ, ಡಾ.ಸಿದ್ದಲಿಂಗಯ್ಯ ಸಾಹಿತ್ಯ ಪ್ರಶಸ್ತಿಗೆ ಡಾ.ಮೊಗಳ್ಳಿ ಗಣೇಶ್, ಮರಾಠಿ ಲೇಖಕ ಉತ್ತಮ ಕಾಂಬ್ಳೆ ಮತ್ತು ಬಿ.ಟಿ.ಜಾಹ್ನವಿ ಆಯ್ಕೆಯಾಗಿದ್ದಾರೆ.
ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ ಜಿ. ಎಲ್. ಎನ್.ಸಿಂಹ, ಬಸವರಾಜ್ ಎಲ್.ಜಾನೆ, ಜಾನಪದಶ್ರೀ ಪ್ರಶಸ್ತಿಗೆ (ವಾದನ ವಿಭಾಗ) ದಕ್ಷಿಣ ಕನ್ನಡದ ಅರುವ ಕೊರಗಪ್ಪ ಶೆಟ್ಟಿ, ಜಿ.ಪಿ.ಜಗದೀಶ್, ಜಾನಪದಶ್ರೀ ಪ್ರಶಸ್ತಿಗೆ(ಗಾಯನ ವಿಭಾಗ) ಕಲ್ಲಪ್ಪ ಮಿರ್ಜಾಪುರ, ಹಲಗೆದುರ್ಗಮ್ಮ ಆಯ್ಕೆಯಾಗಿದ್ದಾರೆ.
ಶ್ರೀನಿಜಗುಣ-ಪುರಂದರ ಪ್ರಶಸ್ತಿಗೆ ಎಂ.ಕೆ. ಸರಸ್ವತಿ, ಅಕ್ಕಮಹಾದೇವಿ ಮಠ, ಕುಮಾರವ್ಯಾಸ ಪ್ರಶಸ್ತಿಗೆ ಸಿದ್ದೇಶ್ವರಶಾಸ್ತ್ರೀ, ಕೃಷ್ಣಗಿರಿ ರಾಮಚಂದ್ರ, ಶಾಂತಲಾನಾಟ್ಯ ಪ್ರಶಸ್ತಿಗೆ ಚಿತ್ರ ವೇಣುಗೋಪಾಲ್, ರೇವತಿ ನರಸಿಂಹನ್, ಸಂತ ಶಿಶುನಾಳ ಷರೀಫ ಪ್ರಶಸ್ತಿಗೆ ಕಸ್ತೂರಿ ಶಂಕರ್, ಎನ್. ಬಿ. ಶಿವಲಿಂಗಪ್ಪ ಆಯ್ಕೆಯಾಗಿದ್ದಾರೆ. ಈ ಎಲ್ಲ ಪ್ರಶಸ್ತಿಗಳು ತಲಾ 5 ಲಕ್ಷ ರೂ. ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ, ಶಾಲು, ಹಾರ, ಫಲತಾಂಬೂಲವನ್ನು ಹೊಂದಿದೆ.
ಈಗಾಗಲೇ ಘೋಷಣೆ ಮಾಡಿರುವ ಪ್ರಶಸ್ತಿ ಪ್ರದಾನ: 2020-21 ಹಾಗೂ 2021-22ನೆ ಸಾಲಿಗೆ ಸಂಬಂಧಿಸಿ ಈಗಾಗಲೇ ಘೋಷಣೆ ಮಾಡಲಾಗಿದ್ದು, ಪ್ರಶಸ್ತಿ ಪ್ರದಾನ ಆಗದೆ ಇರುವ ಕಾರಣ ಅದೇ ದಿನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಬಸವ ರಾಷ್ಟ್ರೀಯ ಪುರಸ್ಕಾರಕ್ಕೆ ಭಿಕು ರಾಮ್ಜಿ ಇದಾತೆ, ಡಾ. ವೀರಣ್ಣ ರಾಜೂರು, ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿಗೆ ಜಪಾನಂದ ಸ್ವಾಮಿಜಿ, ಸದಾನಂದ ಮಾಸ್ಟರ್, ಟಿ. ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿಗೆ ಎಂ. ವಾಸುದೇವ ಮೋಹಿತೆ, ಹರಿಪ್ರಸಾದ್ ಚೌರಾಸಿಯಾ ಆಯ್ಕೆಯಾಗಿದ್ದಾರೆ.
ಪಂಪ ಪ್ರಶಸ್ತಿಗೆ ಪ್ರೊ. ಸಿ.ಪಿ.ಕೃಷ್ಣಕುಮಾರ್, ಡಾ. ಎಸ್.ಆರ್. ರಾಮಸ್ವಾಮಿ, ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿಗೆ ಡಾ. ರಮಾನಂದ ಬನಾರಿ, ಎಂ.ಎನ್. ವೆಂಕಟೇಶ, ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಕೌಸಲ್ಯಾ ಧರಣೀಂದ್ರ, ಮಾಲತಿ ಪಟ್ಟಣಶೆಟ್ಟಿ, ಬಿ.ವಿ. ಕಾರಂತ ಪ್ರಶಸ್ತಿಗೆ ಎಸ್. ಮಾಲತಿ, ಡಾ.ಬಿ.ವಿ.ರಾಜಾರಾಂ, ಅಬ್ದುಲ್ಲ ಪಿಂಜಾರ ಆಯ್ಕೆಯಾಗಿದ್ದಾರೆ.
ಡಾ. ಗುಬ್ಬಿ ವೀರಣ್ಣ ಪ್ರಶಸ್ತಿಗೆ ಕುಮಾರಸ್ವಾಮಿ, ಬಾಬಣ್ಣ ಕಲ್ಮನಿ, ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿಗೆ ಗಾಯತ್ರಿ ದೇಸಾಯಿ, ವಿಜಯ್ ಹಾಗರಗುಂಡಗಿ ಜಾನಪದಶ್ರೀ ಪ್ರಶಸ್ತಿ ವಾದನ ವಿಭಾಗದಲ್ಲಿ ಹುಸೇನಾ ಬಿ ಬುಡೇನ್, ಕುಮಾರಸ್ವಾಮಿ, ಗಾಯನ ವಿಭಾಗದಲ್ಲಿ ಮಾರೆಪ್ಪ ಮಾರೆಪ್ಪ ದಾಸರ, ಡಾ. ಅಪ್ಪಗೆರೆ ತಿಮ್ಮರಾಜು ಆಯ್ಕೆಯಾಗಿದ್ದಾರೆ.
ಶ್ರೀ ನಿಜಗುಣ-ಪುರಂದರ ಪ್ರಶಸ್ತಿಗೆ ಪಂಡಿತ್ ಎಂ. ವೆಂಕಟೇಶ್ ಕುಮಾರ, ಎಂ.ಎಸ್. ಶೀಲಾ, ಕುಮಾರ ವ್ಯಾಸ ಪ್ರಶಸ್ತಿಗೆ ರಾಜಾರಾಂ ಮೂರ್ತಿ, ಡಾ. ಎನ್. ಕೆ. ರಾಮಶೇಷನ್, ಶಾಂತಲಾ ನಾಟ್ಯಪ್ರಶಸ್ತಿಗೆ ಎಂ.ಆರ್. ಕೃಷ್ಣಮೂರ್ತಿ, ಬಿ.ಎಸ್. ಸುನಂದಾದೇವಿ, ಸಂತ ಶಿಶುನಾಳ ಷರೀಫ ಪ್ರಶಸ್ತಿಗೆ ಪುತ್ತೂರು ನರಸಿಂಹ, ಚಂದ್ರಶೇಖರ ಜೋಯಿಸ್ ಆಯ್ಕೆಯಾಗಿದ್ದಾರೆ.







