ಬೆಳಗಾವಿಯಲ್ಲಿ ಬಜೆಟ್ ಅಧಿವೇಶನ ನಡೆಸಲು ಸಿಎಂಗೆ ಸಭಾಪತಿ ಹೊರಟ್ಟಿ ಪತ್ರ

ಬಸವರಾಜ ಹೊರಟ್ಟಿ
ಬೆಂಗಳೂರು : ‘ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಂಬರುವ ಬಜೆಟ್ ಅಧಿವೇಶನ ನಡೆಸುವ ದಿಟ್ಟ ಹಾಗೂ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳುವ ಮೂಲಕ ಪ್ರಾದೇಶಿಕ ಅಸಮತೋಲನೆ ನಿವಾರಣೆಗೆ ಕ್ರಮ ಕೈಗೊಳ್ಳಬಾರದೇಕೆ?’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಇಂದಿಲ್ಲಿ ಮನವಿ ಮಾಡಿದ್ದಾರೆ.
ಸೋಮವಾರ ಹಣಕಾಸು ಸಚಿವರು ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವ ಹೊರಟ್ಟಿ ಅವರು, ‘ಬೆಳಗಾವಿಯಲ್ಲಿ ಬಜೆಟ್ ಅಧಿವೇಶನ ನಡೆಸುವುದರಿಂದ 2026ರಲ್ಲಿ ತಾವುಗಳು ಉತ್ತರ ಕರ್ನಾಟಕ ಭಾಗದ ಜನರಿಗೆ ವಿಶೇಷ ಉಡುಗೊರೆ ನೀಡುವುದರಿಂದ ಅಖಂಡ ಕರ್ನಾಟಕದ ಬಾಂಧವ್ಯ ಬೆಸೆಯಲು ಸಾಧ್ಯ. ಈ ವಿನೂತನ ಪ್ರಯೋಗದ ಮೂಲಕ ಆ ಭಾಗದ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತಹ ಒಂದು ಇತಿಹಾಸ ಸೃಷ್ಟಿಸಬೇಕು’ ಎಂದು ಕೋರಿದ್ದಾರೆ.
ತಾವುಗಳು ಎರಡು ಬಾರಿ ಸಿಎಂ ಆಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅಭಿವೃದ್ದಿಶೀಲ ಆಡಳಿತ ನೀಡುತ್ತಾ ಬಂದಿರುತ್ತೀರಿ ಹಾಗೂ ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಅತೀಹೆಚ್ಚು ಕಾಲ ಸಿಎಂ ಆಗಿ ಸೇವೆ ಸಲ್ಲಿಸಿರುತ್ತಿರುವುದು ಸಂತಸದ ವಿಷಯ. ಪ್ರಾದೇಶಿಕ ಅಸಮತೋಲನೆ ನಿರ್ಮೂಲನೆ ಮಾಡುವ ಮೂಲಕ ಅಖಂಡ ಕರ್ನಾಟಕದ ಅಭಿವೃದ್ಧಿ ಕಾರ್ಯಸಾಧ್ಯವಾಗುತ್ತದೆ ಎನ್ನುವುದು ನನ್ನ ಅನಿಸಿಕೆ ಎಂದು ಅವರು ತಿಳಿಸಿದ್ದಾರೆ.
‘ಅನುದಾನ ಹರಿದರೂ ಅಭಿವೃದ್ಧಿ ನಿಂತಿದೆ, ಪ್ರಾದೇಶಿಕ ಅಸಮಾನತೆ ನಿವಾರಿಸುವ ಜಾರಿ ಪ್ರಕ್ರಿಯೆ ದುರ್ಬಲ ಎಂದು ಇತ್ತಿಚಿಗೆ ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗುತ್ತಿವೆ’. ಪ್ರಾದೇಶಿಕ ಅಸಮಾನತೆ ಅಧ್ಯಯನ ಸಮಿತಿಗಳಾದ ಡಾ.ನಂಜುಂಡಪ್ಪ ವರದಿಯು ಸಲ್ಲಿಕೆಯಾಗಿ ಅದರ ಅನುಷ್ಠಾನದ ನಂತರ ಯಾವುದೇ ಗಣನೀಯ ಬದಲಾವಣೆಯಾಗಿರುವುದಿಲ್ಲ. ಅದೇ ರೀತಿ ಪ್ರೊ.ಎಂ.ಗೋವಿಂದ ರಾವ್ ವರದಿಯ ನಂತರವೂ ಜನರ ನಿರೀಕ್ಷೆಗೆ ತಕ್ಕಂತೆ ಪ್ರಾದೇಶಿಕ ಸಮಾನತೆಯ ಅಭಿವೃದ್ಧಿಯ ಯೋಜನೆಗಳಿಗೆ ಆ ಭಾಗದ ಜನರಿಗೆ ತೃಪ್ತಿಯಾಗಿರುವುದಿಲ್ಲ.
ಆದುದರಿಂದ, ಸದರಿ ವರದಿಗಳನ್ನು ಅಧ್ಯಯನ ನಡೆಸಿ ಎಲ್ಲ ಪ್ರದೇಶಗಳ ಸಮಾನ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಸೂಕ್ತ ಕ್ರಿಯಾ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಬಹುದಾಗಿದೆ ಹಾಗೂ ಈ ರೀತಿಯ ಪ್ರಾದೇಶಿಕ ಅಸಮತೋಲನೆಗಳ ನಿರ್ಮೂಲನೆಗೆ ಸಮಗ್ರ ಯೋಜನೆಗಳನ್ನು ತಮ್ಮಂತಹ ಗಟ್ಟಿತನದ ಮುಖ್ಯಮಂತ್ರಿಯವರಿಂದ ನಿರೀಕ್ಷಿಸಬಹುದಾಗಿದೆ ಎಂದು ಹೊರಟ್ಟಿ ಪತ್ರದಲ್ಲಿ ತಿಳಿಸಿದ್ದಾರೆ.







