ಕೇಂದ್ರ 10-15 ದಿನದಲ್ಲಿ 1.35 ಲಕ್ಷ ಮೆ.ಟನ್ ಯೂರಿಯಾ ಒದಗಿಸುವ ಭರವಸೆ : ಬಸವರಾಜ ಬೊಮ್ಮಾಯಿ

ಹೊಸದಿಲ್ಲಿ : ಇನ್ನೂ ಹತ್ತು-ಹದಿನೈದು ದಿನಗಳಲ್ಲಿ ಕರ್ನಾಟಕ ರಾಜ್ಯಕ್ಕೆ ಅಗತ್ಯವಿರುವ 1.35 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಗೊಬ್ಬರವನ್ನು ಪೂರೈಸುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜೆ.ಪಿ.ನಡ್ಡಾ ಭರವಸೆ ನೀಡಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸೋಮವಾರ ದಿಲ್ಲಿಯಲ್ಲಿ ಕೇಂದ್ರ ಸಚಿವ ಜೆ.ಪಿ.ನಡ್ಡಾರನ್ನು ಬಿಜೆಪಿ ಸಂಸದರೊಂದಿಗೆ ಭೇಟಿ ಮಾಡಿ, ಸಮಾಲೋಚನೆ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ರೈತರಿಗೆ ಸಕಾಲಕ್ಕೆ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಮುಂಗಾರು ಹಾಗೂ ಮುಂಗಾರು ಪೂರ್ವ ಮಳೆ ಬಂದಿರುವುದರಿಂದ ದೊಡ್ಡ ಪ್ರಮಾಣದಲ್ಲಿ ರೈತರು ಮೆಕ್ಕೆಜೋಳ ಬೆಳೆಯುತ್ತಿದ್ದಾರೆ ಎಂದರು.
ರೈತರು ಒಂದು ಬಾರಿ ಯೂರಿಯಾ ಗೊಬ್ಬರ ಹಾಕುತ್ತಾರೆ. ಆದರೆ, ಈ ಬಾರಿ ಒಂದು ಸಾರಿ ಹಾಕಿದ ನಂತರ ಮಳೆಯಾಗಿ ಮತ್ತೊಂದು ಸಾರಿ ಹಾಕಿದಾಗಲೂ ಮಳೆಯಾಗಿ ಮೂರು ಬಾರಿ ಗೊಬ್ಬರ ಹಾಕುವ ಸ್ಥಿತಿ ನಿರ್ಮಾಣ ಆಗಿದೆ. ಪದೇ ಪದೇ ಯುರಿಯಾ ಹಾಕುವುದರಿಂದ ರೈತರಿಗೆ ಅರ್ಥಿಕ ಸಂಕಷ್ಟ ಬಂದೊದಗಿದೆ ಎಂದರು.
ರಾಜ್ಯದಲ್ಲಿ ರಸಗೊಬ್ಬರ ವಿತರಣೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಕರ್ನಾಟಕದಲ್ಲಿ ಗೊಬ್ಬರ ಇದೆ. ಆದರೆ, ರೈತರಿಗೆ ಸಿಗುತ್ತಿಲ್ಲ. ಶ್ರೀಮಂತ ರೈತರು ಹೆಚ್ಚುವರಿ ಹಣವನ್ನು ಕೊಟ್ಟು ಗೊಬ್ಬರ ಖರಿದಿಸುತ್ತಿದ್ದಾರೆ. ಆದರೆ, ಸಣ್ಣ ಮತ್ತು ಅತಿಸಣ್ಣ ರೈತರು ಅಂಗಡಿಗಳ ಮುಂದೆ ಗೊಬ್ಬರಕ್ಕಾಗಿ ಸಾಲಿನಲ್ಲಿ ನಿಂತಿದ್ದಾರೆ. ಅನಧಿಕೃತವಾಗಿ ಗೊಬ್ಬರ ದಾಸ್ತಾನು ಮಾಡಿ, ಕಾಳಸಂತೆ ಮೂಲಕ ಹೆಚ್ಚುವರಿ ದರಕ್ಕೆ ಗೊಬ್ಬರ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದರು.







