ಕೇಂದ್ರದ ಸಮೀಕ್ಷೆಯೇ ಅಂತಿಮ | ಆಪಾದನೆಯಿಂದ ತಪ್ಪಿಸಿಕೊಳ್ಳಲು ಸಾಮಾಜಿಕ, ಆರ್ಥಿಕ ಗಣತಿ : ಬೊಮ್ಮಾಯಿ

ಬೆಂಗಳೂರು, ಸೆ. 12: ಆಪಾದನೆಯಿಂದ ತಪ್ಪಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಗೆ ಮುಂದಾಗಿದ್ದಾರೆ. ರಾಜ್ಯದಲ್ಲಿ ಏನೇ ಗಣತಿ ಮಾಡಿದರೂ ಕೇಂದ್ರದ ಸಮೀಕ್ಷೆಯೆ ಅಂತಿಮ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೇಂದ್ರ ಸರಕಾರ ಈಗಾಗಲೇ ವ್ಯವಸ್ಥಿತ ಜನ ಗಣತಿ ಮಾಡಲು ತೀರ್ಮಾನಿಸಿದೆ. ಅದರಲ್ಲೇ ಜಾತಿ ಗಣತಿಯನ್ನೂ ಮಾಡಬೇಕು ಎಂದು ಉದ್ದೇಶಿಸಿದ್ದಾರೆ. ಹೀಗಿರುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಜಾತಿ ಸಮೀಕ್ಷೆ ಮಾಡುತ್ತೇವೆಂದರೆ ಅದಕ್ಕೆ ಅಧಿಕಾರವಿಲ್ಲ ಎಂದರು.
ಹೀಗಾಗಿಯೇ ‘ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ’ ಎಂಬ ಹೆಸರಿನಲ್ಲಿ ಬದಲಾವಣೆ ಮಾಡಿದರು. ಈ ಹಿಂದೆ ಗಣತಿಗೆ ರಾಜ್ಯ ಸರಕಾರವು 350 ಕೋಟಿ ರೂ.ಖರ್ಚು ಮಾಡಿ ಮಾಡಿದ್ದ ಸಮೀಕ್ಷೆ ವರದಿ ಅವರೇ ಒಪ್ಪಿಕೊಳ್ಳಲಿಲ್ಲ. ಕೇಂದ್ರ ಸರಕಾರದ ಸಮೀಕ್ಷೆಯೇ ಅಧೀಕೃತ ಸಮೀಕ್ಷೆ ಎಂದು ಅವರು ತಿಳಿಸಿದರು.
ಸರ್ವಪಕ್ಷ ಸಭೆ ಕರೆಯಿರಿ: ನದಿ ಜೋಡಣೆ ವಿಚಾರದಲ್ಲಿ ಸರಕಾರ ಕರ್ನಾಟಕಕ್ಕೆ ಅನ್ಯಾಯ ಆಗಲು ಬಿಡಬಾರದು. ಕೃಷ್ಣಾ ಹಾಗೂ ಕಾವೇರಿ ಜಲಾನಯನದಿಂದ ನಮಗೆ ಹೆಚ್ಚು ನೀರು ಸಿಗುತ್ತದೆ. ನಮ್ಮ ನಿಲುವನ್ನು ಗಟ್ಟಿಯಾಗಿ ಹೇಳಬೇಕು. ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ವಪಕ್ಷ ಸಭೆ ಕರೆಯಬೇಕು ಎಂದು ಬಸವರಾಜ ಬೊಮ್ಮಾಯಿ ಅಗ್ರಹಿಸಿದರು.
ಬ್ಯಾಲೆಟ್‍ನಲ್ಲಿ ಲೋಪಗಳಿವೆ: ವಿದ್ಯುನ್ಮಾನ ಮತಯಂತ್ರ (ಇವಿಎಂ)ದ ಬದಲು ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ಕಾಂಗ್ರೆಸ್ ಮುಂದಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ನವರು 136 ಸೀಟು ಗೆದ್ದಿದ್ದಾರೆ. ಬ್ಯಾಲೆಟ್ ಓಟ್‍ನಲ್ಲಿ ಒಬ್ಬ ಅಭ್ಯರ್ಥಿ ಮತಗಳ ಜೊತೆ ಇನ್ನೊಬ್ಬ ಸೋತ ಅಭ್ಯರ್ಥಿ ಮತ ಸೇರಿಸಿ ಏಣಿಸಿದ್ದ ಉದಾಹರಣೆಗಳಿವೆ. ಅಲ್ಲಿಯೂ ನ್ಯೂನತೆಗಳಿವೆ ಎಂದರು.







