ಸಿದ್ದರಾಮಯ್ಯ ರಾಜ್ಯ ರಾಜಕಾರಣದಲ್ಲಿರುವುದು ಡಿಕೆಶಿಗೆ ತೂಗು ಕತ್ತಿ : ಬೊಮ್ಮಾಯಿ

ಹಾವೇರಿ : ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ‘ರಾಜ್ಯ ರಾಜಕಾರಣದಲ್ಲಿಯೇ ಇರುತ್ತೇನೆ’ ಎಂದಿರುವುದು ಡಿ.ಕೆ.ಶಿವಕುಮಾರ್ ಗೆ ತೂಗು ಕತ್ತಿ. ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೂ ಬಿಜೆಪಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ನಾಲ್ಕು ದಶಕಗಳ ಕಾಲ ಸುದೀರ್ಘ ರಾಜಕಾರಣ ಮಾಡಿದ್ದಾರೆ. 1983ರಲ್ಲಿ ರಾಜಕೀಯಕ್ಕೆ ಬಂದಿದ್ದರು. ಅವರು ನಮ್ಮ ತಂದೆಯವರಿಗೆ ಆತ್ಮೀಯರಾಗಿದ್ದರು. ನಮ್ಮ ತಂದೆಯವರ ಸಂಪುಟದಲ್ಲಿದ್ದರು. ಎಲ್ಲಕ್ಕಿಂತ ಹೆಚ್ಚು ಅವರು ಅಹಿಂದ ಮಾಡಿದಾಗ ನಾನೊಬ್ಬನೇ ಅಹಿಂದ ವರ್ಗ ಬಿಟ್ಟು ಮುಖ್ಯ ಭಾಷಣ ಮಾಡಿದ್ದೆ ಎಂದರು.
ಸಿದ್ದರಾಮಯ್ಯ ಸಮಾಜವಾದಿಯಾಗಿ ಸಾಮಾಜಿಕ ಕಳಕಳಿ ಇರುವ ನಾಯಕ, ಅವರನ್ನು ತೆಗೆಯುವ ಮೂಲಕ ಹಿಂದುಳಿದ ವರ್ಗದ ನಾಯಕನಿಗೆ ಕೊಡಲಿ ಪೆಟ್ಟು ನೀಡಿದ್ದಾರೆ. ಕಾಂಗ್ರೆಸ್ ಯಾವಾಗಲೂ ಹಿಂದುಳಿದ ವರ್ಗದವರಿಗೆ ಅನ್ಯಾಯ ಮಾಡುತ್ತಲೇ ಬಂದಿದೆ. ಕಾಂಗ್ರೆಸ್ ಹಿಂದುಳಿದ ವರ್ಗದ ಸಿಎಂ ಅನ್ನು ತೆಗೆದು ಹಾಕಿದೆ ಎಂದು ದೂರಿದರು.
ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಇದೆ. ಆದರೆ, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಬೆಂಬಲಿಗರಿಗೆ ಎಷ್ಟು ಜನರಿಗೆ ಸಚಿವ ಸ್ಥಾನ ಸಿಗುತ್ತದೆ, ಅವರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಕಾಂಗ್ರೆಸ್ ಪಕ್ಷದ ಭವಿಷ್ಯ ನಿಂತಿದೆ. ನಾಳೆಯೇ ಚುನಾವಣೆ ನಡೆದರೂ ಎದುರಿಸಲು ಬಿಜೆಪಿ ಸಿದ್ಧವಿದೆ ಎಂದರು.






