ಗೊಂದಲದ ವಾತಾವರಣದಲ್ಲಿ ಡಿಕೆಶಿ ಇನ್ನಿಂಗ್ಸ್ ಆರಂಭ : ಬಸವರಾಜ ಬೊಮ್ಮಾಯಿ

ಬೆಂಗಳೂರು : ಡಿ.ಕೆ.ಶಿವಕುಮಾರ್ ಅವರು ಗೊಂದಲದ ವಾತಾವರಣದಲ್ಲಿ ತಮ್ಮ ಇನ್ನಿಂಗ್ಸ್ ಅನ್ನು ಆರಂಭಿಸುತ್ತಿದ್ದಾರೆ. ರಾಜ್ಯದ ಜನತೆ ಈ ಸರಕಾರದ ಮೇಲಿನ ವಿಶ್ವಾಸ ಕಳೆದುಕೊಂಡಿದ್ದು, ಅವರಿಗೆ ಅವಕಾಶ ಬಂದಾಗ ಸರಕಾರವನ್ನು ಕಿತ್ತೊಗೆಯಲಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿನ ನಾಯಕತ್ವ ಬದಲಾವಣೆ ಆಡಳಿತದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಇದು ಕಾಂಗ್ರೆಸ್ ದುರಾಡಳಿತದ ಮುಂದುವರೆದ ಭಾಗ. ರಾಜ್ಯದ ಆರ್ಥಿಕತೆಯ ವಿಚಾರದಲ್ಲಿ ಈಗಾಗಲೇ ಹಾನಿ ಮಾಡಲಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಆಗಿದ್ದು, ವ್ಯವಸ್ಥೆಯನ್ನು ಸುಧಾರಿಸಲು ಡಿ.ಕೆ.ಶಿವಕುಮಾರ್‍ಗೆ ಸಮಯ ಸಿಗುತ್ತದೆಯೊ ಇಲ್ಲವೊ ಗೊತ್ತಿಲ್ಲ ಎಂದರು.
ಸಂಪುಟ ರಚನೆಯ ಕಸರತ್ತಿನಲ್ಲಿ ಆಂತರಿಕ ಭಿನ್ನಮತ ಹೊರಬರುತ್ತಿದೆ. ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ಡಾ.ಪರಮೇಶ್ವರ ಅವರನ್ನು ಸಿಎಂ ಮಾಡದಿರುವುದರಿಂದ ಒಬಿಸಿ ಮತ್ತು ಎಸ್‍ಸಿ- ಎಸ್‍ಟಿ ಸಮುದಾಯದವರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಗೊಂದಲದ ವಾತಾವರಣದಲ್ಲಿ ತಮ್ಮ ಇನ್ನಿಂಗ್ಸನ್ನು ಆರಂಭಿಸುತ್ತಿದ್ದಾರೆ ಎಂದು ಅವರು ಟೀಕಿಸಿದರು.




