‘ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ರದ್ದು’ | ಸುಪ್ರೀಂಕೋರ್ಟ್‍ನಲ್ಲಿ ರಿಟ್ ಪಿಟಿಷನ್ ಸಲ್ಲಿಸಬೇಕು : ಬಸವರಾಜ ಬೊಮ್ಮಾಯಿ

ಬೆಂಗಳೂರು : ರಾಜ್ಯ ಹೈಕೊರ್ಟ್ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳವನ್ನು ರದ್ದು ಪಡಿಸಿರುವುದನ್ನು ಪ್ರಶ್ನಿಸಿ ರಾಜ್ಯ ಸರಕಾರ ಸುಪ್ರೀಂಕೋರ್ಟ್ ನಲ್ಲಿ ರಿಟ್ ಪಿಟಿಷನ್ ಹಾಕಬೇಕು. ಇಲ್ಲದಿದ್ದರೆ ಈ ನಾವೇ ಸುಪ್ರೀಂ ಕೋರ್ಟ್ ಗೆ ತೆಗೆದುಕೊಂಡು ಹೋಗುತ್ತೇವೆ ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಮ್ಮ ಸರಕಾರ ಮೀಸಲಾತಿಯನ್ನು ಹೆಚ್ಚು ಮಾಡುವಂತಹ ಸಂದರ್ಭದಲ್ಲಿ ನ್ಯಾ.ನಾಗಮೋಹನ್ ದಾಸ್ ಅವರ ವರದಿ ಆಧಾರದ ಮೇಲೆ, ಅದಕ್ಕೆ ವಿಧಾನ ಮಂಡಲದ ಎರಡೂ ಸದನದಲ್ಲಿ ಕಾನೂನನ್ನು ಪಾಸ್ ಮಾಡಿ ಮಾಡಿರುವಂತದ್ದು ಎಂದು ಹೇಳಿದ್ದಾರೆ.
ಎಸ್.ಸಿ, ಎಸ್.ಟಿ ಜನಾಂಗಕ್ಕೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯ ಅವಕಾಶ ಕಲ್ಪಿಸುವ ಸಂವಿಧಾನದಲ್ಲಿ ಇರುವ ಕಾರಣ ಹಾಗೂ ನಾಗಮೋಹನ್ ದಾಸ್ ವರದಿಯ ಶಿಫಾರಿನ ಆಧಾರದಲ್ಲಿ ನಾವು ಕಾನೂನು ಮಾಡಿದ್ದು. ಇದನ್ನು ಪ್ರಶ್ನಿಸಿ ಹೈಕೋರ್ಟ್‍ನಲ್ಲಿ ಪಿಐಎಲ್ ಹಾಕಿದವರು ಈ ಜನಾಂಗಗಳ ಅಭಿವೃದ್ಧಿಯ ವಿರೋಧಿಗಳು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು, ಛತ್ತೀಸಗಢ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಶೇ.50ಕ್ಕಿಂತ ಹೆಚ್ಚು ಮೀಸಲಾತಿ ಆಗಿದೆ, ಆ ಉದಾಹರಣೆ ಸಮೇತವಾಗಿ ಸುಪ್ರೀಂಕೋರ್ಟ್ ನಲ್ಲಿ ರಿಟ್ ಪಿಟಿಷನ್ ಹಾಕಬೇಕು ಎಂದು ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.






