6 ಬಾರಿಯ ಶಾಸಕ, ಹಿರಿಯ ನಾಯಕ ಬಸವರಾಜ ರಾಯರೆಡ್ಡಿ ಒಲಿದ ಸಚಿವ ಸ್ಥಾನ

ಕೊಪ್ಪಳ : ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಸಚಿವ ಸ್ಥಾನ ಒಲಿದಿದೆ. ಸುದೀರ್ಘ ರಾಜಕೀಯ ಅನುಭವ ಹೊಂದಿರುವ ರಾಜ್ಯದ ಪ್ರಮುಖ ಕಾಂಗ್ರೇಸ್ ನಾಯಕರಾಗಿರುವ ಬಸವರಾಜ ರಾಯರೆಡ್ಡಿ ಅವರು ಈ ಮೊದಲು ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು, ಆದರೆ ಕಳೆದ ಬಾರಿ ಅವರಿಗೆ ಸಚಿವ ಸ್ಥಾನ ಕೈತಪ್ಪಿತ್ತು. ಈ ಬಾರಿ ಸಚಿವ ಸ್ಥಾನ ಸಿಗುವ ನಿರೀಕ್ಷೆಇತ್ತು, ಅದರಂತೆ ಅವರಿಗೆ ಸಚಿವ ಸ್ಥಾನ ಸಿಕ್ಕಿದೆ.
ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ 1985ರಿಂದ 1999, 2004-2009, 2013-2018 ಹಾಗೂ 2023ರಲ್ಲಿ 16ನೇ ವಿಧಾನಸಭೆಗೆ ಒಟ್ಟು 6 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ರಾಯರೆಡ್ಡಿ ಅವರು 1996 ರಿಂದ 1998 ರವರೆಗೆ ಲೋಕಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, 1994-96 ಮತ್ತು 2016-18ರ ಅವಧಿಯಲ್ಲಿ ರಾಜ್ಯ ಸಂಪುಟದಲ್ಲಿ ಸಚಿವರಾಗಿ, 1989-94ರಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಹಾಗೂ 1998-99ರಲ್ಲಿ ದೆಹಲಿ ವಿಶೇಷ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆರ್ಥಿಕ ಸಲಹೆಗಾರರಾಗಿಯೂ ಅವರು ಕರ್ತವ್ಯ ನಿರ್ವಹಿಸಿದ್ದರು.




