ಬಸವೇಶ್ವರರ ಜಾತಿರಹಿತ ಪ್ರತಿಪಾದನೆ ಇರುವುದು ಆರೆಸ್ಸೆಸ್ನಲ್ಲಿ ಮಾತ್ರ: ಬಿ.ವೈ. ವಿಜಯೇಂದ್ರ

ಬಿ.ವೈ. ವಿಜಯೇಂದ್ರ
ಬೆಂಗಳೂರು: ಸಾಮಾಜಿಕ ಹರಿಕಾರ ಬಸವೇಶ್ವರರು ಪ್ರತಿಪಾದಿಸಿದ ಜಾತಿ ರಹಿತ ಸಮಾಜದ ನೆಲೆ ಇರುವುದು ರಾಷ್ಟ್ರೀಯ ಸ್ವಯಂ ಸೇವಕರ ಸಂಘ(ಆರೆಸ್ಸೆಸ್)ದಲ್ಲಿ ಮಾತ್ರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ ಅವರ ‘ರವಿ ಹಂಜ್ ರಚಿತ ಬಸವ ಮಂಟಪ ಕೃತಿಯ ಮೂಲಕ ಬಸವಣ್ಣನರಿಗೆ ಅವಮಾನ ಮಾಡುವಲ್ಲಿ ಆರೆಸ್ಸೆಸ್ನ ಕೈವಾಡ ಇದೆ’ ಎಂಬ ಹೇಳಿಕೆಗೆ ಪರೋಕ್ಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ವಿಜಯೇಂದ್ರ, ‘ಅವಕಾಶ ಸಿಕ್ಕಾಗಲೆಲ್ಲ ಆರೆಸ್ಸೆಸ್ ವಿರುದ್ಧ ವಿಷಕಾರುವುದೇ ಕೆಲವರಿಗೆ ತೆವಲು, ಬೆಂದ ಮನೆಯಲ್ಲಿ ಗಳ ಇರಿದುಕೊಳ್ಳುವ ಬುದ್ದಿ ರವಿ ಹಂಜ್ ಪುಸ್ತಕ ಇಂತಹವರಿಗೀಗ ಸರಕಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
‘ಬಸವ ಮಂಟಪ’ ಎಂಬ ಕೃತಿಯ ಮೂಲಕ ತನ್ನ ವಿಕೃತಿ ಮೆರೆಯಲು ಹೋಗಿ, ಬಸವ ವಿರೋಧಿ ನೀಚ ಮನಸ್ಥಿತಿಯನ್ನು ಅನಾವರಣಗೊಳಿಸಿಕೊಂಡ ‘ರವಿ ಹಂಜ್’ ವ್ಯಕ್ತಿತ್ವದೊಂದಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ತಳುಕು ಹಾಕಲು ಹೊರಟಿರುವುದು ಸಮಯಸಾಧಕತನ ಹಾಗೂ ಅವರ ಹೀನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ.
ಜಾತಿ, ಪ್ರಾಂತೀಯತೆ, ಭಾಷೆಗಳ ಎಲ್ಲೆ ಮೀರಿ, ಜಾತಿ ವ್ಯವಸ್ಥೆಯನ್ನು ಎಂದಿಗೂ ಬೆಂಬಲಿಸದ, ಇವತ್ತಿಗೂ ಜಾತಿಯ ಸಂಕೇತಗಳು ತನ್ನಲ್ಲಿ ಬೇರುಬಿಡಲು ಅವಕಾಶವನ್ನೇ ನೀಡದೇ ತನ್ನ ಸಿದ್ಧಾಂತದೊಂದಿಗೆ ಬಸವ ತತ್ವವನ್ನು ಅಳವಡಿಸಿಕೊಂಡಿರುವ ಸಂಘಟನೆ ಯಾವುದಾದರೂ ಇದ್ದರೆ ಅದು ರಾಷ್ಟ್ರ ಭಕ್ತಿಯೊಂದನ್ನೇ ತನ್ನ ಏಕೈಕ ಆದ್ಯತೆಯನ್ನಾಗಿಸಿಕೊಂಡಿರುವ ರಾಷ್ಟಿಯ ಸ್ವಯಂ ಸೇವಕ ಸಂಘ ಮಾತ್ರ ಎಂದು ವಿಜಯೇಂದ್ರ ಹೊಗಳಿದ್ದಾರೆ.
‘ಇವನಾರವ, ಇವನಾರವ ಎನ್ನದೆ, ಇವ ನಮ್ಮವ, ಇವ ನಮ್ಮವ’ ಎಂದು ಭಾರತೀಯತೆಯನ್ನು ಪೂಜಿಸುವವರನ್ನು ಅಪ್ಪಿಕೊಂಡಿರುವ ಏಕೈಕ ಸಂಘಟನೆ ಆರೆಸ್ಸೆಸ್ ಎಂಬುದನ್ನು ಕುಚೋದ್ಯದ, ತಿಳಿಗೇಡಿ ಹೇಳಿಕೆಗಳನ್ನು ನೀಡುವವರು ಮನಗಾಣಲಿ ಎಂದು ವಿಜಯೇಂದ್ರ ಉಲ್ಲೇಖಿಸಿದ್ದಾರೆ.






