ತಂಬಾಕು ವ್ಯಾಪಾರಿಗಳಿಗೆ ಪರವಾನಗಿ ಕಡ್ಡಾಯ : ಬಿ.ದಯಾನಂದ್

ಬಿ.ದಯಾನಂದ್
ಬೆಂಗಳೂರು : ತಂಬಾಕು ವ್ಯಾಪಾರಿಗಳು ಪರವಾನಗಿ(ಲೈಸನ್ಸ್) ಹೊಂದಿರುವುದು ಕಡ್ಡಾಯವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಮಾತನಾಡಿರುವ ಅವರು, 2024ರಿಂದ 2025ರ ಎಪ್ರಿಲ್ವರೆಗೆ ಬೆಂಗಳೂರು ನಗರದಲ್ಲಿ ಸಿಗರೇಟ್ ಮತ್ತಿತರ ತಂಬಾಕು ಉತ್ಪನ್ನಗಳ ಕಾಯ್ದೆಯಡಿ 57,130 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು, 80.8 ಲಕ್ಷ ರೂಪಾಯಿ ದಂಡ ಸಂಗ್ರಹಿಸಲಾಗಿದೆ ಎಂದರು.
ಇ-ಸಿಗರೇಟ್ಗಳು, ವೇಪಿಂಗ್ ಸಾಧನಗಳನ್ನು ಒಳಗೊಂಡ ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ಸ್ ನಿಷೇಧದ ಅನುಷ್ಠಾನಕ್ಕೆ ವಿಶೇಷ ಗಮನ ನೀಡಲಾಗುತ್ತಿದೆ. ಮಾಲ್ಗಳು, ಕಾಫಿ ಬಾರ್ಗಳು, ಅಂಗಡಿಗಳಲ್ಲಿ ಅನೀರಿಕ್ಷಿತ ಭೇಟಿಯ ಮೂಲಕ ತಪಾಸಣೆ ನಡೆಸಲಾಗುತ್ತದೆ ಎಂದು ಬಿ.ದಯಾನಂದ್ ಹೇಳಿದರು.
ಬೆಂಗಳೂರಿನಲ್ಲಿ ಮೇ 27ರಿಂದ ಜೂನ್ 2ರವರೆಗೂ ಪೊಲೀಸ್ ಸಿಬ್ಬಂದಿ, ಬಿಬಿಎಂಪಿ ಮಾರ್ಷಲ್ಸ್ ಹಾಗೂ ಎನ್ಜಿಒಗಳ ಸಹಭಾಗಿತ್ವದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳುವ ತಂಬಾಕು ಉತ್ಪನ್ನಗಳ ನಿಯಂತ್ರಣ ಹಾಗೂ ಕಾನೂನುಗಳ ಪಾಲನೆಯ ಕುರಿತು ಅರಿವು ಮೂಡಿಸಲಿದ್ದೇವೆ ಎಂದು ಬಿ.ದಯಾನಂದ್ ತಿಳಿಸಿದರು.
ನಗರದ ಆರೋಗ್ಯಕರ ಭವಿಷ್ಯಕ್ಕಾಗಿ ನಾವು ಬದ್ಧರಾಗಿದ್ದೇವೆ. ಅಕ್ರಮ ತಂಬಾಕು ಸೇವನೆ, ವೇಪಿಂಗ್ ಮತ್ತು ಹುಕ್ಕಾ ಬಳಕೆಯ ವಿರುದ್ಧದ ಕಠಿಣ ಕ್ರಮಗಳು ಹಾಗೂ ವ್ಯಾಪಾರಿಗಳಲ್ಲಿ ಪರವಾನಗಿ ಜಾಗೃತಿ ಕುರಿತ ಕಾರ್ಯಚಟುವಟಿಕೆಗಳು ತಂಬಾಕು ಮುಕ್ತ ವಾತಾವರಣ ನಿರ್ಮಾಣಕ್ಕೆ ಸಹಕಾರಿಯಾಗಲಿವೆ. ನಾಗರಿಕರು ಹಾಗೂ ವ್ಯಾಪಾರಿಗಳು ಕಾನೂನು ಪಾಲನೆಗಾಗಿ ಪೊಲೀಸರೊಂದಿಗೆ ಕೈಜೋಡಿಸುವ ಮೂಲಕ ಸಹಕರಿಸಬೇಕು ಎಂದು ಬಿ.ದಯಾನಂದ್ ಮನವಿ ಮಾಡಿದರು.







