‘ಕಂಡಕ್ಟರ್ ಮೇಲಿನ ಹಲ್ಲೆ’: ತೀವ್ರ ಸ್ವರೂಪ ಪಡೆಯುತ್ತಿರುವ ಪ್ರತಿಭಟನೆ
ಫೆ.25ಕ್ಕೆ ಬೆಳಗಾವಿಗೆ ಬರುತ್ತಿದ್ದೇನೆ: ಟಿ.ಎ.ನಾರಾಯಣಗೌಡ

ಬೆಂಗಳೂರು: ‘ಕನ್ನಡದಲ್ಲಿ ಮಾತನಾಡು’ ಎಂದಿದ್ದಕ್ಕೆ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪರ-ವಿರೋಧ ಪ್ರತಿಭಟನೆಗಳು ಆರಂಭವಾಗಿದ್ದು, ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ನಾಳೆ (ಫೆ.24) ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬೆಳಗಾವಿಗೆ ಭೇಟಿ ನೀಡುವುದಾಗಿ ಪ್ರಕಟಿಸಿದ್ದಾರೆ.
ಈ ನಡುವೆಯೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ‘ನನ್ನ ಹೃದಯ ಏಟು ತಿಂದು, ಕೇಸು ಹಾಕಿಸಿಕೊಂಡ ಆ ಅಮಾಯಕ ಕಂಡಕ್ಟರ್ ನ ಜೀವಕ್ಕಾಗಿ ಮಿಡಿಯುತ್ತಿದೆ. ಫೆ.25ರಂದು ನಾನು ಬೆಳಗಾವಿಗೆ ಬರುತ್ತಿದ್ದೇನೆ. ಎಂಇಎಸ್ ಪುಂಡಾಟಿಕೆಯನ್ನು ಇನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.
ರವಿವಾರ ವಿಡಿಯೋ ಪ್ರತಿಕ್ರಿಯೆ ನೀಡಿರುವ ನಾರಾಯಣಗೌಡ, ‘ಮಂಗಳವಾರ(ಫೆ.25) ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳ ಕರವೇ ಕಾರ್ಯಕರ್ತರು, ಅಕ್ಕ-ಪಕ್ಕದ ಜಿಲ್ಲೆಗಳ ಮುಖಂಡರೂ ಬೆಳಗಾವಿಗೆ ಬರುತ್ತಿದ್ದೇವೆ. ನಾನು ಬರುವಾಗ ಸುಮ್ಮನೇ ಬಂದು ಹೋಗುವುದಿಲ್ಲ. ಇಷ್ಟು ಸೂಕ್ಷ್ಮ ನಮ್ಮ ಪೊಲೀಸ್ ಇಲಾಖೆಗೆ ಗೊತ್ತೇ ಇದೆ’ ಎಂದು ಹೇಳಿದ್ದಾರೆ.
ನಾನು ಬೆಳಗಾವಿಗೆ ಬಂದೇ ಬರುತ್ತೇನೆ. ಬಾಳೇಕುಂದ್ರಿಗೂ ಬರುತ್ತೇನೆ. ಬಾಳೇಕುಂದ್ರಿ ಕರ್ನಾಟಕದ ಹೆಮ್ಮೆಯ ಇಂಜಿನಿಯರ್, ನೀರಾವರಿ ತಜ್ಞ ಶಿವಪ್ಪ ಗುರುಬಸಪ್ಪ ಬಾಳೇಕುಂದ್ರಿಯವರ ಊರು. ಕೃಷ್ಣ, ಮಲಪ್ರಭ, ಘಟಪ್ರಭ ವ್ಯಾಪ್ತಿಯ ನೀರಾವರಿ ಯೋಜನೆಗಳ ರೂವಾರಿಯವರು. ಇಂತಹ ಶ್ರೇಷ್ಠ ವ್ಯಕ್ತಿಗೆ ಜನ್ಮ ನೀಡಿದ ಅಪ್ಪಟ ಕನ್ನಡದ ಊರು ಬಾಳೇಕುಂದ್ರಿಗೆ ಬರಲು ನನಗೆ ಯಾವ ಹಿಂಜರಿಕೆ ಇರಲು ಸಾಧ್ಯ? ಕರ್ನಾಟಕದ ಮೂಲೆಮೂಲೆಯ ಯಾವ ಹಳ್ಳಿಗಾದರೂ ನಾನು ಹೋಗುತ್ತೇನೆ. ಅದು ನನ್ನ ಹಕ್ಕು, ಹೋಗಬೇಕಾದಾಗ ಹೋಗೇ ಹೋಗುತ್ತೇನೆ ಎಂದು ನಾರಾಯಣಗೌಡ ತಿಳಿಸಿದ್ದಾರೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಕೂಡಲೇ ಮಧ್ಯೆ ಪ್ರವೇಶಿಸಿ ಕಂಡಕ್ಟರ್ ಮಹದೇವಪ್ಪ ವಿರುದ್ಧದ ಪ್ರಕರಣ ಹಿಂದಕ್ಕೆ ಪಡೆಯಬೇಕು. ಈ ಸಂಘರ್ಷ ಹೀಗೇ ಮುಂದುವರಿಯಲಿ ಎಂಬುದು ಅವರ ಆಸೆಯಾದರೆ ನಾವೇನೂ ಮಾಡಲು ಸಾಧ್ಯವಿಲ್ಲ. ಕರ್ನಾಟಕದ ಶಾಂತಿ ಕದಡಿದರೆ ಅದಕ್ಕೆ ಸರಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಗೆ ಸಚಿವ ರಾಮಲಿಂಗಾರೆಡ್ಡಿ:
ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾದ ಇನ್ನೂ ಕೆಲವು ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಇನ್ನೂ ಬಸ್ ಇಲ್ಲದೇ ಪ್ರಯಾಣಿಕರು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಸಂಸದ ಗೋವಿಂದ ಕಾರಜೋಳ ಸರಕಾರ ಇದನ್ನು ಬಗೆಹರಿಸಿ, ಬಸ್ ಸಂಚಾರಕ್ಕೆ ಒತ್ತಾಯಿಸಿದ್ದಾರೆ. ಈ ಎಲ್ಲ ಬೆಳವಣಿಗೆ ನಡುವೆ ನಾಳೆ ಬೆಳಗಾವಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತೆರಳುತ್ತಿದ್ದು, ಸಾರಿಗೆ ಇಲಾಖೆಗೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದು ಬಸ್ ಆರಂಭದ ಬಗ್ಗೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
‘ಕನ್ನಡ ಮಾತನಾಡಿ’ ಎಂದ್ದಿದ್ದಕ್ಕೆ ಬೆಳಗಾವಿ ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣ ಖಂಡನೀಯ. ಬೆಳಗಾವಿ ಮಹಾರಾಷ್ಟ್ರದ ಗಡಿ ವಿಚಾರ ಸಾಕಷ್ಟು ಚರ್ಚೆಯಾಗಿದೆ. ಅಂತಿಮವಾಗಿ ನಮಗೆ, ಅವರಿಗೆ ಸೇರಬೇಕಾದ ಹಳ್ಳಿಗಳು ಸೇರಿವೆ. ಆದಾಗ್ಯೂ ಈ ರೀತಿ ಕ್ಯಾತೆ ತೆಗೆಯುವವರ ವಿರುದ್ಧ ರಾಜ್ಯ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳುತ್ತದೆ’
-ಡಾ.ಎಚ್.ಸಿ.ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ







