Belagavi | ಸಕ್ಕರೆ ಕಾರ್ಖಾನೆ ಬಾಯ್ಲರ್ ಸ್ಫೋಟ ಪ್ರಕರಣ; ಚಿಕಿತ್ಸೆ ಫಲಿಸದೆ ನಾಲ್ವರು ಕಾರ್ಮಿಕರು ಮೃತ್ಯು, ಮೃತರ ಸಂಖ್ಯೆ 7ಕ್ಕೆ ಏರಿಕೆ

ಬೆಳಗಾವಿ : ಇಲ್ಲಿನ ಬೈಲಹೊಂಗಲ ತಾಲ್ಲೂಕಿನ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಭೀಕರ ದುರಂತದಲ್ಲಿ ಗಾಯಗೊಂಡಿದ್ದ ನಾಲ್ವರು ಕಾರ್ಮಿಕರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಮೃತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಕಾರ್ಖಾನೆಯ ನಂಬರ್–1 ಕಂಪಾರ್ಟ್ಮೆಂಟ್‌ನಲ್ಲಿ ನಿನ್ನೆ ವಾಲ್ ರಿಪೇರಿ ಕಾಮಗಾರಿ ನಡೆಯುವ ವೇಳೆ ಸ್ಫೋಟ ಸಂಭವಿಸಿದೆ. ಈ ಸಂದರ್ಭ ಬಾಯ್ಲರ್‌ನಲ್ಲಿದ್ದ ಬಿಸಿ ಪದಾರ್ಥ ಕಾರ್ಮಿಕರ ಮೇಲೆ ಎರಚಿ, ಎಂಟು ಮಂದಿ ಗಂಭೀರವಾಗಿ ಸುಟ್ಟು ಗಾಯಗೊಂಡಿದ್ದರು.
ತಕ್ಷಣ ಗಾಯಾಳುಗಳನ್ನು ಬೆಳಗಾವಿಯ ಆಸ್ಪತ್ರೆ ಹಾಗೂ ಬೈಲಹೊಂಗಲ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯಲ್ಲಿ ದೀಪಕ ಮುನವಳ್ಳಿ (31), ಸುದರ್ಶನ ಬನೋಶಿ (25), ಅಕ್ಷಯ್ ಸುಭಾಷ್ ಚೋಪಡೆ (48) ಎಂಬವರು ನಿನ್ನೆ ಮೃತಪಟ್ಟಿದ್ದರು.
ಇದಾದ ಬಳಿಕ ಇಂದು ಮತ್ತೆ ಭರತ್ ಬಸಪ್ಪ ಸಾರವಾಡಿ (27), ಮಂಜುನಾಥ ಮಡಿವಾಳಪ್ಪ ಕಾಜಗಾರ್ (28), ಗುರುನಾಥ ಭೀರಪ್ಪ ತಮ್ಮಣ್ಣವರ (38), ಮಂಜುನಾಥ ಗೋಪಾಲ ತೇರದಾಳ (31) ಎಂಬವರ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಸದ್ಯ ತೀವ್ರ ನಿಗಾ ಘಟಕದಲ್ಲಿ ಗೋಕಾಕ ತಾಲ್ಲೂಕಿನ ಗಿಳಿಹೊಸೂರ ಗ್ರಾಮದ ರಾಘವೇಂದ್ರ ಮಲ್ಲಪ್ಪ ಗಿರಿಯಾಳ (36) ಅವರಿಗೆ ಚಿಕಿತ್ಸೆ ಮುಂದುವರಿದಿದೆ.
ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







