ಬೆಳಗಾವಿ ಸುವರ್ಣಸೌಧಕ್ಕೆ ವರ್ಷಪೂರ್ತಿ ಬೆಳಕಿನ ಅಲಂಕಾರ
ಸ್ಪೀಕರ್ ಖಾದರ್ ಅವರ ಯೋಜನೆಗೆ ಅಧಿವೇಶನದ ಸಂದರ್ಭದಲ್ಲಿ ಚಾಲನೆ

ಬೆಂಗಳೂರು : ದಶಮಾನೋತ್ಸವ ಪೂರೈಸಿರುವ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 4 ರಿಂದ ಚಳಿಗಾಲದ ಅಧಿವೇಶನ ಆರಂಭಗೊಳ್ಳಲಿದೆ. ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಸುವರ್ಣ ವಿಧಾನಸೌಧಕ್ಕೆ ಹೊಸ ಮೆರುಗು ತರಲು ವಿನೂತನ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದ್ದಾರೆ. ಸುವರ್ಣಸೌಧ ಕೇವಲ ವರ್ಷದ ಅಧಿವೇಶನಕ್ಕೆ ಸೀಮಿತಗೊಳಿಸದೇ, ಗಡಿ ಪ್ರದೇಶದ ಪ್ರವಾಸಿ ತಾಣವಾಗಿ ಮಾರ್ಪಾಡು ಮಾಡಲು ಚಿಂತನೆ ನಡೆಯುತ್ತಿದೆ.
ಈ ಹಿಂದೆ ವರ್ಷದಲ್ಲೊಮ್ಮೆ ಅಧಿವೇಶನ ಸಂದರ್ಭ ಮಾತ್ರ ರಾತ್ರಿಯ ಬೆಳಕಿನ ವ್ಯವಸ್ಥೆ ಮಾಡಲಾಗುತ್ತಿತ್ತು. ಈಗ ಹೊಸ ಒಪ್ಪಂದದಂತೆ, ಅಧಿವೇಶನ ನಡೆಯುವ ದಿನಗಳಲ್ಲದೇ ಪ್ರತಿ ಶನಿವಾರ ಮತ್ತು ಭಾನುವಾರ ಹಾಗೂ ರಾಷ್ಟ್ರೀಯ ದಿನಾಚರಣೆಗಳಂದು ಬಣ್ಣಬಣ್ಣದ ವಿನ್ಯಾಸದ ಬೆಳಕಿನೊಂದಿಗೆ ಸುವರ್ಣ ಸೌಧ ಕಂಗೊಳಿಸಲು ರೂಪುರೇಷೆ ಮಡಲಾಗಿದೆ. ರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಬೆಳಕಿನ ವ್ಯವಸ್ಥೆ ಮಾಡುತ್ತಿರುವ ಗುತ್ತಿಗೆದಾರರಿಗೆ 10 ವರ್ಷದ ಸುವರ್ಣಸೌಧದ ಬೆಳಕಿನ ನಿರ್ವಹಣೆಗೆ ನೀಡಲಾಗಿದೆ. ಡಿ.4 ಅಥವಾ 5 ರಂದು ಬೆಳಕಿನ ಅಲಂಕಾರವನ್ನು ಸ್ಪೀಕರ್ ಖಾದರ್ ಅವರು ಉದ್ಘಾಟಿಸುವರು.
RGBW ಎಲ್ಇಡಿ ಡೈನಾಮಿಕ್ ಲೈಟ್ ನೊಂದಿಗೆ ಸುವರ್ಣ ಸೌಧ ಕಂಗೊಳಿಸಲಿದೆ. ಬಗೆಬಗೆಯ ವಿನ್ಯಾಸ, ಹಲವು ಬಣ್ಣಗಳಲ್ಲಿ ಕಂಪ್ಯೂಟರೀಕೃತ ಸೌಲಭ್ಯದೊಂದಿಗೆ ಸೌಧದ ಅಂದ ನೂರ್ಮಡಿಗೊಳಿಸಲಿದೆ. ಈ ಹಿಂದೆ ಅಧಿವೇಶನದ ದಿನ ಉರಿದ ಬೆಳಕಿನ ಅದೇ ಖರ್ಚು ವೆಚ್ಚದಲ್ಲಿ, ಹೊಸ ತಂತ್ರಜ್ಞಾನದಲ್ಲಿ ವರ್ಷಪೂರ್ತಿ ಸುವರ್ಣಸೌಧ ಬೆಳಗಲಿದೆ ಎಂದು ಮೂಲಗಳು ತಿಳಿಸಿವೆ.





