ಭ್ರಷ್ಟಾಚಾರ ಪಿತಾಮಹ ಹೇಳಿಕೆ : ಏಕವಚನದಲ್ಲಿಯೇ ಬೈದಾಡಿಕೊಂಡ ಹಾಲಿ-ಮಾಜಿ ಉಪಮುಖ್ಯಮಂತ್ರಿ

ಡಾ.ಸಿ.ಎನ್.ಅಶ್ವತ್ಥನಾರಾಯಣ/ಡಿ.ಕೆ.ಶಿವಕುಮಾರ್
ಬೆಂಗಳೂರು, ಆ.13: ‘ಭ್ರಷ್ಟಾಚಾರದ ಪಿತಾಮಹ ಯಾರು’ ಎಂಬ ಹೇಳಿಕೆ ವಿಚಾರವಾಗಿ ಹಾಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಸದಸ್ಯ ಡಾ.ಸಿ.ಎನ್.ಅಶ್ವತ್ಥನಾರಾಯಣ ಏಕವಚನದಲ್ಲಿಯೇ ಬೈದಾಡಿಕೊಂಡ ಪ್ರಸಂಗಕ್ಕೆ ವಿಧಾನಸಭೆ ಸಾಕ್ಷಿಯಾಯಿತು.
ಬುಧವಾರ ಮಧ್ಯಾಹ್ನ ವಿಧಾನಸಭೆಯಲ್ಲಿ ನಿಯಮ 69ರ ಮೇರೆಗೆ ರಸಗೊಬ್ಬರ ವಿತರಣೆಯಲ್ಲಿನ ಸಮಸ್ಯೆ ಕುರಿತ ಚರ್ಚೆ ವೇಳೆ ಕಾಂಗ್ರೆಸ್-ಬಿಜೆಪಿ ನಡುವೆ ಆರೋಪ-ಪ್ರತ್ಯಾರೋಪ ನಡೆಯಿತು. ಈ ವೇಳೆ ಸ್ಮಾರ್ಟ್ ಮೀಟರ್ನಲ್ಲಿ ಅಕ್ರಮವಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಅಶ್ವತ್ಥನಾರಾಯಣ ವಾಗ್ವಾದ ನಡೆಸಿದರು.
ಆಗ ಮಧ್ಯಪ್ರವೇಶಿಸಿದ ಡಿ.ಕೆ.ಶಿವಕುಮಾರ್ ಅವರು, ಅಸಮರ್ಥರು ಅವರಲ್ಲ. ನೀವು ಅಸಮರ್ಥರು. ರಾಜ್ಯದ ಜನ ಮತ ನೀಡಿ ಅಧಿಕಾರ ನಡೆಸಲು ಅವಕಾಶ ನೀಡಿರುವ ಜಾರ್ಜ್ ಅವರು ಅಸಮರ್ಥರಲ್ಲ, ನೀವು ಅಸಮರ್ಥರಾಗಿರುವ ಕಾರಣ ನಿಮ್ಮ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದೆ ಎಂದು ತಿರುಗೇಟು ನೀಡಿದರು.
ಈ ವೇಳೆ ಅಶ್ವತ್ ನಾರಾಯಣ ಅವರು, ಈ ಸರಕಾರ ಅಸಮರ್ಥ, ಜನವಿರೋಧಿ, ಭ್ರಷ್ಟಾಚಾರ ಸರಕಾರ ಎಂದರು. ಮತ್ತೆ ಇದಕ್ಕೆ ತಿರುಗೇಟು ನೀಡಿದ ಶಿವಕುಮಾರ್, ನೀನು, ನಿನ್ನ ಪಕ್ಷ ಭ್ರಷ್ಟಾಚಾರದ ಪಿತಾಮಹರು. ನಿಮ್ಮ ಭ್ರಷ್ಟಾರದಿಂದಲೇ ನಾವು 135 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಬಂದಿದ್ದೇವೆ. ನೀನು ರಾಮನಗರಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಬಂದಿದ್ದೇ, ಆಗ ನಿನಗೆ ಠೇವಣಿ ಕೂಡ ಬರಲಿಲ್ಲ. ನೀನು ನಿಜವಾದ ಅಸಮರ್ಥ ಎಂದು ಕೆಂಡಾ-ಮಂಡಲರಾದರು.
ಹೀಗೆ ಇಬ್ಬರ ನಡುವೆ ವಾಕ್ಸಮರ ಜೋರಾಗಿದ್ದು ಮಾತ್ರವಲ್ಲದೆ ಏಕವಚನದಲ್ಲಿಯೇ ಬೈದಾಡಿಕೊಂಡರು. ಇದರ ನಡುವೆ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ತೀವ್ರಗೊಂಡಾಗ ಸಭಾಧ್ಯಕ್ಷರು ಸದನವನ್ನು ಐದು ನಿಮಿಷಗಳ ಕಾಲ ಮುಂದೂಡಲಾಯಿತು. ಬಳಿಕ ಸದನ ಆರಂಭಗೊಂಡಾಗ ಸುಗಮವಾಗಿ ನಡೆಯಿತು.
ಕೆ.ಜೆ.ಜಾರ್ಜ್ ಗೆ ಅಪಮಾನವಾದರೆ ಸಹಿಸುವುದಿಲ್ಲ :
ಕೆ.ಜೆ.ಜಾರ್ಜ್ ನಮ್ಮ ನಾಯಕರು, ಅವರಿಗೆ ಅಪಮಾನವಾದರೆ ಸಹಿಸುವುದಿಲ್ಲ. ಪಕ್ಷದ ಅಧ್ಯಕ್ಷನಾಗಿ ನಮ್ಮ ನಾಯಕನಿಗೆ ಆಗುವ ಅಪಮಾನ ನೋಡಿಕೊಂಡು ಸುಮ್ಮನಿದ್ದರೆ ನನ್ನಂತಹ ನಾಲಾಯಕ್ ನಾಯಕ ಬೇರೊಬ್ಬನಿರುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನಸಭೆ ಕಲಾಪ ವಾಗ್ವಾದ ಬಳಿಕ ಮತ್ತೆ ಆರಂಭವಾದಾಗ ಮಾತನಾಡಿದ ಶಿವಕುಮಾರ್, ನಾನು 10 ಚುನಾವಣೆಯನ್ನು ಎದುರಿಸಿದ್ದು 8 ಬಾರಿ ಶಾಸಕನಾಗಿ ಇಲ್ಲಿದ್ದೇನೆ. ರಾಮಕೃಷ್ಣ ಹೆಗಡೆ, ವೀರೇಂದ್ರ ಪಾಟೀಲ್, ದೇವೇಗೌಡರು, ಬೊಮ್ಮಾಯಿ, ಜೆ.ಎಚ್. ಪಟೇಲರು, ಯಡಿಯೂರಪ್ಪನವರು, ಎಸ್.ಎಂ.ಕೃಷ್ಣ, ಬಂಗಾರಪ್ಪ, ಬಸವಲಿಂಗಪ್ಪ, ಕೆ.ಎಚ್.ರಂಗನಾಥ್, ಕೆ.ಎಚ್.ಪಾಟೀಲ್ರಂತಹ ಮೇಧಾವಿಗಳ ಜೊತೆ ಕೆಲಸ ಮಾಡಿದ್ದೇನೆ. ವಿರೋಧ ಪಕ್ಷಗಳಲ್ಲಿ ಎಂ.ಸಿ.ನಾಣಯ್ಯ, ಚಂದ್ರೇಗೌಡರು ಸೇರಿದಂತೆ ಅನೇಕರು ಇದ್ದರು ಎಂದು ಸ್ಮರಿಸಿದರು.
ನಮ್ಮಲ್ಲೂ ಬಿಸಿರಕ್ತ ಇದೆ. ಆದರೆ ಅದನ್ನು ಎಲ್ಲಿ ಉಪಯೋಗಿಸಬೇಕೋ ಅಲ್ಲಿ ಬಳಸಬೇಕು. ಅದನ್ನು ಸದನದ ಹೊರಗೆ ಇಟ್ಟುಕೊಳ್ಳಬೇಕು. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ನಾನು ಆರಂಭದಲ್ಲಿ ಪದವೀಧರನಲ್ಲ. ನಾನು ಪದವಿ ಪಡೆದಿದ್ದು ನನ್ನ 47ನೆ ವಯಸ್ಸಿಗೆ. ನನಗೆ ದೊಡ್ಡ ಶಿಕ್ಷಣ ಹಿನ್ನೆಲೆ ಇಲ್ಲದಿದ್ದರೂ ಬೇರೆಯವರನ್ನು ನೋಡಿ, ಅನುಭವದಿಂದ ಕಲಿತಿದ್ದೇನೆ. ಅನುಭವದ ಮೇಲೆ ನಾವು ಇಲ್ಲಿಯವರೆಗೂ ಬಂದಿದ್ದೇವೆ. ಯಾವುದೇ ಮನುಷ್ಯ ತನ್ನ ಸ್ವಾಭಿಮಾನಕ್ಕೆ, ಆತ್ಮಗೌರವಕ್ಕೆ ಧಕ್ಕೆಯಾದಾಗ ಅದನ್ನು ಸಹಿಸುವುದಿಲ್ಲ ಎಂದರು.
ನಾನು ಜಾರ್ಜ್ ಅವರ ಕೆಳಗೆ ಕೆಲಸ ಮಾಡಿದ್ದೇನೆ. ಅವರು ಅಧ್ಯಕ್ಷರಾಗಿದ್ದಾಗ ಅವರ ಜೊತೆ ಕೆಲಸ ಮಾಡಿದ್ದೇನೆ. ಅವರು ರಾಜ್ಯಾಧ್ಯಕ್ಷರಾಗಿದ್ದಾಗ ನಾನು ತಾಲೂಕು ಅಧ್ಯಕ್ಷನಾಗಿದ್ದೆ. ಅವರು ನಮ್ಮ ನಾಯಕ. ನಾನು ಪಕ್ಷದ ಅಧ್ಯಕ್ಷನಾಗಿ ಅವರ ಪರ ನಿಲ್ಲುವುದು ನನ್ನ ಕರ್ತವ್ಯ. ಹೀಗಾಗಿ ನಾನು ಆವೇಶದಲ್ಲಿ ಮಾತನಾಡಬೇಕಾಯಿತು ಎಂದು ವಿವರಿಸಿದರು.
ನಾನು ಆಡಿರುವ ಮಾತುಗಳು ಸರಿಯಾಗಿರಬಹುದು ಅಥವಾ ತಪ್ಪಾಗಿರಬಹುದು. ನನ್ನ ಆವೇಶ, ಭಾಷೆ ತಪ್ಪಾಗಿರಬಹುದು. ಅದನ್ನು ಸರಿ ಎಂದು ಸಮರ್ಥನೆ ಮಾಡಿಕೊಳ್ಳುವುದಿಲ್ಲ. ಆದರೆ ನಾನು ಕೂಡ ಮನುಷ್ಯ. ಸಾರ್ವಜನಿಕ ಜೀವನದಲ್ಲಿ ನನಗೆ ನನ್ನದೇ ಆದ ಸಾಮಥ್ರ್ಯವಿದೆ. ನನ್ನದೇ ಆದ ಸಂಘಟನೆ ಶಕ್ತಿ, ಮಾತಿನ ಕಲೆ, ಅನುಭವ ಇದೆ. ಹಾಗೆಂದ ಮಾತ್ರಕ್ಕೆ ನಾವು ದೊಡ್ಡವರಾಗಿರಲಿ, ಚಿಕ್ಕವರಾಗಿರಲಿ ಯಾರನ್ನೂ ನೋಯಿಸಬಾರದು. ವಿರೋಧ ಪಕ್ಷದಲ್ಲಿರುವವರು ಕೂಡ ತಮ್ಮದೇ ಆದ ಅನುಭವದಲ್ಲಿ ಸಾಧನೆ ಮಾಡಿ ಇಲ್ಲಿಗೆ ಬಂದಿರುತ್ತಾರೆ. ಈ ಸದನಕ್ಕೆ ಬಂದಿರುವ ಪ್ರತಿಯೊಬ್ಬ ಸದಸ್ಯರಿಗೂ ನಾವು ಸೂಕ್ತ ಗೌರವ ನೀಡಲೇಬೇಕು ಎಂದು ನುಡಿದರು.







