ಬಳ್ಳಾರಿ ಗುಂಪು ಘರ್ಷಣೆ| ನಿಷ್ಪಕ್ಷಪಾತ ತನಿಖೆಗೆ ಸಿಟಿ ರವಿ ಆಗ್ರಹ

ಚಿಕ್ಕಮಗಳೂರು, ಜ.2: ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಾಟೆ ಮತ್ತು ಫೈರಿಂಗ್ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ಹಾಗೂ ನ್ಯಾಯಯುತವಾದ ತನಿಖೆಯಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಆಗ್ರಹಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿ.ಟಿ.ರವಿ, ವಾಲ್ಮೀಕಿ ಜಯಂತಿ ಆಚರಿಸಲು ಪ್ರಾರಂಭಿಸಿದ್ದು ಬಿಜೆಪಿ ಸರಕಾರ, ಕಾಂಗ್ರೆಸ್ ರಾಮನ ಅಸ್ತಿತ್ವವನ್ನೇ ನಿರಾಕರಿಸಿ ಪರೋಕ್ಷವಾಗಿ ವಾಲ್ಮೀಕಿ ಅಸ್ತಿತ್ವವನ್ನು ನಿರಾಕರಿಸುವ ಕೆಲಸ ಮಾಡಿತ್ತು. ರಾಮಸೇತು ವೇಳೆ ಸುಪ್ರೀಂಕೋರ್ಟ್‍ಗೆ ರಾಮ ಇತಿಹಾಸವಲ್ಲ, ಕಥೆ ಎಂದು ಕಾಂಗ್ರೆಸ್ ಕಥೆ ಹೇಳಿತ್ತು. ಬಳ್ಳಾರಿಯಲ್ಲಿ ನಡೆದ ಘಟನೆ ಬಗ್ಗೆ ಸಮಗ್ರವಾಗಿ ತನಿಖೆಯಾಗಲಿ. ಪೂರ್ವಗ್ರಹ ಅಥವಾ ದ್ವೇಷ ತನಿಖೆಯಲ್ಲಿ ವ್ಯಕ್ತವಾಗಬಾರದು. ಯಾರು ಗುಂಡು ಹಾರಿಸಿದರು? ಕೊಲೆಗೆ ಯಾರು ಕಾರಣ ಎನ್ನುವುದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಹೇಳಿದರು.
ದುರುದ್ದೇಶದಿಂದ ಪ್ರಕರಣ ದಾಖಲಿಸುವುದು, ಕ್ರಮ ಕೈಗೊಳ್ಳುವುದು ಸಮಂಜಸವಲ್ಲ. ಅನುಮತಿ ಪಡೆದು ಬ್ಯಾನರ್ ಹಾಕಿದರೂ, ಅನುಮತಿ ಪಡೆಯದೆ ಬ್ಯಾನರ್ ಹಾಕಿದರೂ ತೆರವುಗೊಳಿಸುವುದು ತಪ್ಪು. ಅನುಮತಿ ಪಡೆಯದೆ ಬ್ಯಾನರ್ ಹಾಕಿದ್ದರೆ ದೂರು ಕೊಡಬಹುದಿತ್ತು. ಬಲಾಬಲ ಪ್ರದರ್ಶನಕ್ಕೆ ಜನಾರ್ಧನ ರೆಡ್ಡಿ ಮನೆ ಬಳಿ ಹೋಗಿದ್ದನ್ನು ಸರಕಾರ ಹೇಗೆ ಸಮರ್ಥಿಸಿಕೊಳ್ಳುತ್ತದೆ. ಇದನ್ನೆಲ್ಲಾ ಗಮನಿಸಿದರೆ ಬ್ಯಾನರ್ ನೆಪವಷ್ಟೆ, ಹಿಂದೆ ಬೇರೆ ಏನೋ ಇರೋ ಸಾಧ್ಯತೆಗಳಿವೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.







