ಬಳ್ಳಾರಿ ಗುಂಪು ಘರ್ಷಣೆ| ಮೃತ ವ್ಯಕ್ತಿಯ ಕುಟುಂಬಕ್ಕೆ 1ಕೋಟಿ ರೂ. ಪರಿಹಾರ ನೀಡುವಂತೆ ರೈತ ಸಂಘ ಆಗ್ರಹ

ಮೈಸೂರು,ಜ.2: ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಗುರುವಾರ ರಾತ್ರಿ ಬ್ಯಾನರ್ ಕಟ್ಟುವ ವಿಚಾರದಲ್ಲಿ ಬಳ್ಳಾರಿ ನಗರದ ಹವಂಬಾವಿಯಲ್ಲಿ ನಡೆದ ಘರ್ಷಣೆಯಲ್ಲಿ ಅಮಾಯಕ ಯುವಕನೊಬ್ಬ ಮೃತಪಟ್ಟಿದ್ದಾನೆ. ಸರಕಾರ ಗುಂಡಿಕ್ಕಿದ ವ್ಯಕ್ತಿಯ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಮೃತ ವ್ಯಕ್ತಿಯ ಕುಟುಂಬದವರಿಗೆ 1 ಕೋಟಿ ರೂ ತಾತ್ಕಾಲಿಕ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಆಗ್ರಹಿಸಿದರು.
ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಇಂಗಲಗುಪ್ಪೆ ಕೃಷ್ಣೇಗೌಡ, ಕೆಲವು ರಾಜಕಾರಣಿಗಳು ಪಿಸ್ತೂಲನ್ನು ಆಟಿಕೆಯ ವಸ್ತು ಎಂದುಕೊಂಡಿದ್ದಾರೆ. ಪರಿಸ್ಥಿತಿ ನಿಭಾಯಿಸುವ ಜವಾಬ್ದಾರಿ ಪೊಲೀಸರಿಗೆ ಇದ್ದ ಮೇಲೆ ಭರತ್‍ರೆಡ್ಡಿ ಅಂಗರಕ್ಷಕ ಎನ್ನಲಾದ ವ್ಯಕ್ತಿ ಗುಂಡು ಹಾರಿಸುವ ಅವಶ್ಯಕತೆ ಇರಲಿಲ್ಲ. ಈ ಬಗ್ಗೆ ಸರಕಾರ ಸಮಗ್ರ ತನಿಖೆ ನಡೆಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಪಕ್ಷಪಾತ ಮಾಡದೆ ತಪ್ಪಿತಸ್ತರನ್ನು ಶಿಕ್ಷೆಗೆ ಒಳಪಡಿಸುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ಕುರಿತು ಈಗಾಗಲೇ ಮಾಜಿ ಸಚಿವರಾದ ಜನಾರ್ಧನ ರೆಡ್ಡಿ, ಶ್ರೀರಾಮುಲು ಸೇರಿದಂತೆ 11 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪರಿಸ್ಥಿತಿ ತಣ್ಣಗಾಗುವವರೆಗೆ ಪೊಲೀಸ್ ಬಂದೋಬಸ್ತ್ ಮಾಡಬೇಕು ಎಂದು ಆಗ್ರಹಿಸಿದರು.





