ಬೆಳ್ತಂಗಡಿ | ಸರಣಿ ಅಪಘಾತ: ಇಬ್ಬರು ದ್ವಿಚಕ್ರ ಸವಾರರು ಮೃತ್ಯು

ಬೆಳ್ತಂಗಡಿ : ಗೂಡ್ಸ್ ಟೆಂಪೋ ಹಾಗೂ ಎರಡು ದ್ವಿಚಕ್ರ ವಾಹನಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿಯ ಚರ್ಚ್ ರೋಡ್ ನಲ್ಲಿ ಬುಧವಾರ ನಡೆದಿದೆ.
ಸ್ಕೂಟರ್ ಸವಾರ ನಾವೂರಿನ ಸಂತೋಷ್ (32) ಹಾಗೂ ಬೈಕ್ ಸವಾರ ಕಣಿಯೂರು ಗ್ರಾಮದ ಪಿಲಿಗೂಡು ನಿವಾಸಿ ಮೋಹನ್ (33) ಮೃತರು.
ಮಂಗಳೂರಿನಿಂದ ಚಿಕ್ಕಮಗಳೂರು ಕಡೆ ಹೋಗುತ್ತಿದ್ದ ಟಾಟಾ ಗೂಡ್ಸ್ ವಾಹನ ಗುರುವಾಯನಕೆರೆ ಕಡೆ ಹೋಗುತ್ತಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದಿದೆ. ಗೂಡ್ಸ್ ಚಾಲಕ ನಿದ್ರೆಯ ಮಂಪರಿನಲ್ಲಿದ್ದ ಎಂದು ಹೇಳಲಾಗುತ್ತಿದೆ.
ಮಂಗಳೂರಿನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಸಂತೋಷ್ ಅಪಘಾತದ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇವರು ಸುವರ್ಣ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೋಹನ್ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಠಾಣೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.
Next Story




