ಬೆಂಗಳೂರು | ಡ್ರಗ್ ಪೆಡ್ಲರ್ಗಳ ಜೊತೆ ಸಂಪರ್ಕ : 11 ಮಂದಿ ಪೊಲೀಸರು ಅಮಾನತು

ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.13: ಡ್ರಗ್ ಪೆಡ್ಲರ್ಗಳ ಜೊತೆ ನೇರ ಸಂಪರ್ಕ ಇಟ್ಟುಕೊಂಡು ಪಾರ್ಟಿ ಮಾಡಿರುವ ಆರೋಪದಡಿ ಇಲ್ಲಿನ ಚಾಮರಾಜಪೇಟೆ ಠಾಣೆಯ ಇಬ್ಬರು ಹೆಡ್ಕಾನ್ಸ್ಟೇಬಲ್ ಸಹಿತ ಒಟ್ಟು 11 ಮಂದಿ ಪೊಲೀಸರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಚಾಮರಾಜಪೇಟೆ ಠಾಣೆಯ ಹೆಡ್ಕಾನ್ಸ್ಟೇಬಲ್ಗಳಾದ ರಮೇಶ್, ಶಿವರಾಜ್, ಇನ್ಸ್ಪೆಕ್ಟರ್ ಟಿ.ಮಂಜಣ್ಣ ಮತ್ತು ಕಾನ್ಸ್ಟೇಬಲ್ಗಳಾದ ಮಧುಸೂದನ್, ಪ್ರಸನ್ನ, ಶಂಕರ್ ಬೆಳಗಲಿ, ಆನಂದ್ ಹಾಗೂ ಜೆ.ಜೆ.ನಗರ ಪೊಲೀಸ್ ಠಾಣೆಯ ಎಎಸ್ಐ ಕುಮಾರ್, ಹೆಡ್ ಕಾನ್ಸ್ಟೇಬಲ್ ಆನಂದ್, ಸಿಬ್ಬಂದಿ ಬಸವಗೌಡ ಸಹಿತ 11 ಮಂದಿಯನ್ನು ಅಮಾನತು ಮಾಡಲಾಗಿದೆ.
ಬೆಂಗಳೂರು ನಗರಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ಅವರು ಚಾಮರಾಜಪೇಟೆ ಠಾಣೆಯ ಇನ್ಸ್ಪೆಕ್ಟರ್ ಟಿ.ಮಂಜಣ್ಣ ಎಂಬುವರನ್ನು ಅಮಾನತುಗೊಳಿಸಿ ಆದೇಶಿಸಿದ್ದರೆ, ಇನ್ನುಳಿದ ಸಿಬ್ಬಂದಿಗಳನ್ನು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರು ಅಮಾನತುಗೊಳಿಸಿದ್ದು, ಸದ್ಯ ಅಮಾನತುಗೊಂಡ ಪೊಲೀಸ್ ಸಿಬ್ಬಂದಿಗಳನ್ನು ಇಲಾಖಾ ತನಿಖೆಗೆ ಒಳಪಡಿಸಲಾಗಿದೆ.
ಡ್ರಗ್ ಪೆಡ್ಲರ್ಗಳ ಮೊಬೈಲ್ನಲ್ಲಿ ಅಮಾನತ್ತಾದ ಪೊಲೀಸ್ ಸಿಬ್ಬಂದಿಗಳು ನಿರಂತರ ಸಂಪರ್ಕದಲ್ಲಿರುವುದು ಮತ್ತು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಮಾತುಕತೆಯ ಆಡಿಯೋಗಳು ಪತ್ತೆಯಾಗಿರುವುದಾಗಿ ಗೊತ್ತಾಗಿದೆ.







