ಬೆಂಗಳೂರು | ‘ಜೈ ಶ್ರೀರಾಮ್’ ಘೋಷಣೆ ಕೂಗಲು ನಿರಾಕರಿಸಿದ್ದಕ್ಕೆ ರಿಕ್ಷಾ ಚಾಲಕನಿಗೆ ಹಲ್ಲೆ: ಆರೋಪ
ಎಫ್ಐಆರ್ ದಾಖಲು

ಸಾಂದರ್ಭಿಕ ಚಿತ್ರ
ಬೆಂಗಳೂರು : ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಲು ನಿರಾಕರಿಸಿದ್ದಕ್ಕೆ ಆಟೋ ರಿಕ್ಷಾ ಚಾಲಕರೊಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿದ ಘಟನೆ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಈ ಸಂಬಂಧ ಆಟೋ ರಿಕ್ಷಾ ಚಾಲಕ ವಸೀಮ್ ಜೊತೆಗಿದ್ದ ಸಹ ಮೆಕ್ಯಾನಿಕ್ ಮೊಹಮ್ಮದ್ ಝಮೀರ್ ಪಾಷಾ ಎಂಬುವರು ನೀಡಿದ ದೂರಿನನ್ವಯ ಸಂಪಿಗೆಹಳ್ಳಿ ಠಾಣಾ ಪೊಲೀಸರು, ಬಿಎನ್ಎಸ್ ಸೆಕ್ಷನ್ 115(2), 118(1), 299, 352 ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜೂ.22ರಂದು ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸುಮಾರು ಏಳು ಮಂದಿಯ ಗುಂಪು ಹಲ್ಲೆ ನಡೆಸಿದ್ದು, ಘಟನೆಯಲ್ಲಿ ವಸೀಮ್ ಎಂಬಾತ ತೀವ್ರವಾಗಿ ಗಾಯಗೊಂಡಿದ್ದಾರೆ.
ದೂರಿನ ವಿವರ: ‘ಸಂಪಿಗೆಹಳ್ಳಿ ಮುಖ್ಯ ರಸ್ತೆಯ ಚೊಕ್ಕನಹಳ್ಳಿ ಬಳಿ ಮೂತ್ರ ವಿಸರ್ಜನೆಗೆಂದು ನಾವು ಆಟೋ ನಿಲ್ಲಿಸಿದ್ದಾಗ ಅಲ್ಲಿಗೆ ಬಂದ ಐದಾರು ಮಂದಿಯ ಗುಂಪು, ‘ನೀವೇಕೆ ಇಲ್ಲಿದ್ದೀರಿ?’ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ವಸೀಮ್ ಅವರಿಗೆ ‘ನಿಮಗೇಕೆ ಬೇಕು’ ಎಂಬುದಾಗಿ ಮರುಪ್ರಶ್ನೆ ಹಾಕಿದ್ದಾರೆ. ಈ ವೇಳೆ ಆ ಗುಂಪು ವಸೀಮ್ಗೆ ಥಳಿಸಲು ಪ್ರಾರಂಭಿಸಿದೆ. ವಸೀಮ್ ನೋವು ಮತ್ತು ಭಯದಿಂದ ‘ಅಲ್ಲಾಹ್’ ಎಂದಾಗ, ಅವರು ಬೆದರಿಸಿದರು. ‘ಜೈಶ್ರೀರಾಮ್’ ಕೂಗುವಂತೆ ಒತ್ತಾಯಿಸಿದರು. ನಾನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದೆ. ಆದರೆ, ಅವರು ವಸೀಮ್ ಮೇಲೆ ಕೋಲಿನಿಂದ ಹಲ್ಲೆ ಮುಂದುವರೆಸಿದ್ದರು ಎಂದು ಝಮೀರ್ ದೂರಿನಲ್ಲಿ ತಿಳಿಸಿದ್ದಾರೆ.







