ಬೆಂಗಳೂರು | ಎಂಜಿನಿಯರಿಂಗ್ ಸೀಟ್ ಬ್ಲಾಕಿಂಗ್ ಪ್ರಕರಣ: 1.37 ಕೋಟಿ ನಗದು, ಹಲವು ದಾಖಲೆಗಳ ವಶಕ್ಕೆ ಪಡೆದ ಈ.ಡಿ.

PC : Enforcement Directorate
ಬೆಂಗಳೂರು : ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟ್ ಬ್ಲಾಕಿಂಗ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 17 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದ ಜಾರಿ ನಿರ್ದೇಶನಾಲಯ(ಈ.ಡಿ.)ವು 1.37 ಕೋಟಿ ರೂ. ನಗದು, ಅಪರಾಧಕ್ಕೆ ಕಾರಣವಾದ ದಾಖಲೆಗಳು ಹಾಗೂ ಕೆಲವು ಡಿಜಿಟಲ್ ಸಾಧನಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿರುವುದಾಗಿ ತಿಳಿಸಿದೆ.
ಈ ಬಗ್ಗೆ ಶನಿವಾರ ಪ್ರಕಟನೆ ಹೊರಡಿಸಿರುವ ಈ.ಡಿ., ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವೃತ್ತಿಪರ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆಯಲ್ಲಿ ಸೀಟ್ ಬ್ಲಾಕ್ ಮತ್ತು ಹಣದ ಪಡೆದು ಸೀಟ್ ನೀಡುತ್ತಿದ್ದರು ಎನ್ನುವುದು ಶೋಧ ಪ್ರಕ್ರಿಯೆಗಳಲ್ಲಿ ಬಹಿರಂಗಗೊಂಡಿದೆ ಎಂದು ಹೇಳಿದೆ.
ಜೂ.25 ಮತ್ತು 26ರಂದು ಜಾರಿ ನಿರ್ದೇಶನಾಲಯ(ಈ.ಡಿ.)ದ ಅಧಿಕಾರಿಗಳ ತಂಡವು 17 ಸ್ಥಳಗಳಲ್ಲಿ ದಾಳಿ ಮಾಡಿ, ಶೋಧ ಕಾರ್ಯಾಚರಣೆ ಕೈಗೊಂಡಿತ್ತು.
ಬೆಂಗಳೂರಿನ ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್, ಆಕಾಶ್ ಇನ್ಸಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ನ್ಯೂ ಹೊರೈಜನ್ ಕಾಲೇಜ್ ಆಫ್ ಎಂಜಿನಿಯರಿಂಗ್ಗೆ ಸಂಬಂಧಪಟ್ಟ ವ್ಯಕ್ತಿಗಳು ಮತ್ತು ಕೆಲವು ಖಾಸಗಿ ಏಜೆಂಟ್ಗಳ ಮನೆ, ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆಗಳು ನಡೆದಿದ್ದವು.





