ಬೆಂಗಳೂರು | ಹಳೆಯ ವೈಷಮ್ಯಕ್ಕೆ ವ್ಯಕ್ತಿಯ ಕೊಲೆ: ಅಪ್ರಾಪ್ತ ಸಹಿತ ಮೂವರ ಬಂಧನ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ಹಳೆಯ ವೈಷಮ್ಯಕ್ಕೆ ವ್ಯಕ್ತಿಯೊಬ್ಬನನ್ನು ಹತ್ಯೆಗೈದ ಪ್ರಕರಣದಡಿ ಅಪ್ರಾಪ್ತ ಸಹಿತ ಮೂವರನ್ನು ಇಲ್ಲಿನ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಆಂಜಿನಪ್ಪ(35) ಎಂಬವರನ್ನು ಹತ್ಯೆಗೈದಿದ್ದ ಆರೋಪದಡಿ ಪ್ರೇಮ್, ದರ್ಶನ್ ಹಾಗೂ ಮತ್ತೋರ್ವ ಅಪ್ರಾಪ್ತನನ್ನು ಬಂಧಿಸಲಾಗಿದೆ. ಥಣಿಸಂದ್ರದ ಆಕಾಶವಾಣಿ ಲೇಔಟ್ನ ನಿರ್ಜನ ಪ್ರದೇಶದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಆಂಜಿನಪ್ಪ ಅವರ ಮೃತದೇಹ ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ವಿವರ: ಪತ್ನಿಯಿಂದ ದೂರವಾಗಿದ್ದ ಆಂಜಿನಪ್ಪ ಉಚಿತವಾಗಿ ಊಟ, ತಿಂಡಿ ಸಿಗುವ ಕಡೆಗಳಲ್ಲಿ ಹೊಟ್ಟೆ ತುಂಬಿಸಿಕೊಂಡು ಕಾಲ ಕಳೆಯುತ್ತಿದ್ದರು. ಕೆಲದಿನಗಳ ಹಿಂದೆ ಆರೋಪಿ ಪ್ರೇಮ್ ಹಾಗೂ ಆಂಜಿನಪ್ಪನ ನಡುವೆ ಕುರಿ ಮೇಯಿಸುವಾಗ ಗಲಾಟೆಯಾಗಿತ್ತು. ಜೂನ್ 23ರಂದು ಆರೋಪಿಗಳು ಮದ್ಯಪಾನ ಮಾಡಿ ತೆರಳುವಾಗ ಆಕಾಶವಾಣಿ ಲೇಔಟ್ ಬಳಿ ಆಂಜಿನಪ್ಪ ಎದುರಾಗಿದ್ದರು.
ಹಳೆ ವೈಷಮ್ಯ ಹೊಂದಿದ್ದ ಪ್ರೇಮ್ ಮತ್ತವನ ಸ್ನೇಹಿತರು ಆಂಜಿನಪ್ಪ ಜೊತೆ ತಕರಾರು ತೆಗೆದು ದೊಣ್ಣೆಗಳಿಂದ ಹಲ್ಲೆ ಮಾಡಿದ್ದರು. ತಲೆಗೆ ತೀವ್ರವಾಗಿ ಗಾಯವಾಗಿದ್ದರಿಂದ ಆಂಜಿನಪ್ಪ ಸ್ಥಳದಲ್ಲೇ ಮೃತಪಟ್ಟಿದ್ದರು. ಮೃತದೇಹವನ್ನು ಗಮನಿಸಿದ್ದ ಸ್ಥಳೀಯರೊಬ್ಬರು ಅಮೃತಹಳ್ಳಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಹತ್ಯೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಅಕ್ಕಪಕ್ಕದ ರಸ್ತೆಗಳ ಸಿಸಿಟಿವಿ ದೃಶ್ಯಗಳು, ಸ್ಥಳೀಯರಿಂದ ಸಂಗ್ರಹಿಸಿದ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದಾಗ ಹತ್ಯೆಯ ಹಿಂದಿನ ಕಾರಣ ಬಯಲಾಗಿದೆ ಎಂದು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಸಜೀತ್ ವಿ.ಜೆ. ವಿವರಿಸಿದ್ದಾರೆ.







