Bengaluru | ಫೇಸ್ಬುಕ್, ಇನ್ಸ್ಟಾಗ್ರಾಂ ಖಾತೆಯಿಂದ ಯುವತಿಗೆ ಸಂದೇಶ; ಹ್ಯಾಕ್ ಆಗಿದೆ ಎಂದು ದೂರು ದಾಖಲಿಸಿದ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ

ಸಿ.ಕೆ.ರಾಮಮೂರ್ತಿ
ಬೆಂಗಳೂರು : ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಅವರ ಫೇಸ್ಬುಕ್, ಇನ್ಸ್ಟಾಗ್ರಾಂ ಖಾತೆಯಿಂದ ಯುವತಿಯೊಬ್ಬರಿಗೆ ಸಂದೇಶ ಕಳುಹಿಸಿರುವ ಆರೋಪದಡಿ ಬೆಂಗಳೂರು ದಕ್ಷಿಣ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ.
ಶಾಸಕ ಸಿ.ಕೆ.ರಾಮಮೂರ್ತಿ ಹೆಸರಿನಲ್ಲಿ ನಕಲಿ ಫೇಸ್ಬುಕ್, ಇನ್ಸ್ಟಾಗ್ರಾಂ ಖಾತೆ ಸೃಷ್ಟಿಸಿ ಹಲವರಿಗೆ ಸಂದೇಶ ಕಳುಹಿಸಲಾಗಿದೆ. ಅಲ್ಲದೇ, ಶಾಸಕರ ಮೊಬೈಲ್ ಹ್ಯಾಕ್ ಮಾಡಿ ಯುವತಿಗೆ ಸಂದೇಶ ಕಳುಹಿಸಲಾಗಿದೆ. ಈ ಸಂಬಂಧ ಹ್ಯಾಕರ್ಸ್ ಹಾಗೂ ನಕಲಿ ಖಾತೆ ಸೃಷ್ಟಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿರುವವರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬುಧವಾರ ಬೆಂಗಳೂರು ದಕ್ಷಿಣ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸಿ.ಕೆ.ರಾಮಮೂರ್ತಿ, ತಮ್ಮ ಮೊಬೈಲ್ ಅನ್ನು ಹ್ಯಾಕ್ ಮಾಡಲಾಗಿದೆ. ತಮ್ಮ ಅಧಿಕೃತ ಇನ್ಸ್ಟಾಗ್ರಾಂ, ಫೇಸ್ಬುಕ್ ಖಾತೆಗಳಿಂದ ಯುವತಿಯೊಬ್ಬಳಿಗೆ ‘ಹಾಯ್, ಹಲೋ, ಗುಡ್ಮಾರ್ನಿಂಗ್, ಗುಡ್ ಇವನಿಂಗ್, ಸೂಪರ್..’ ಇತ್ಯಾದಿ ಸಂದೇಶಗಳನ್ನು ಕಳುಹಿಸಲಾಗಿದೆ. ನನ್ನ ರಾಜಕೀಯ ಏಳಿಗೆಯನ್ನು ಸಹಿಸದವರು ಮಾಡಿರುವ ಕುತಂತ್ರ ಇದಾಗಿದೆ ಎಂದು ಆರೋಪಿಸಿದ್ದಾರೆ.
ರಾಜಕೀಯವನ್ನು ರಾಜಕೀಯವಾಗಿ ನೋಡಿದರೆ ಇಂತಹ ಪ್ರಮಾದಗಳು ನಡೆಯುವುದಿಲ್ಲ. ನನ್ನ ಏಳಿಗೆ ಸಹಿಸದೆ ಇಂತಹ ಹೀನ ಕೃತ್ಯ ಮಾಡಿರುವವರಿಗೆ ಕಾನೂನಿನ ಮೂಲಕವೇ ಪಾಠ ಕಲಿಸಲಾಗುವುದು ಎಂದು ಸಿ.ಕೆ.ರಾಮಮೂರ್ತಿ ಎಚ್ಚರಿಸಿದ್ದಾರೆ.







