ಬೆಂಗಳೂರಿನ ಐದು ನಗರ ಪಾಲಿಕೆಗಳ ವಾರ್ಡ್‍ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟ

ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಾರ್ಡ್‍ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಪಟ್ಟಿಯಲ್ಲಿ ಒಟ್ಟು 88,92,528 ಮತದಾರರಿದ್ದಾರೆ. ಎ.6ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಸೋಮವಾರ ಇಲಲಿನ ಜಿಬಿಎ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜ.19ರಂದು ಕರಡು ಮತದಾರರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿತ್ತು. ಅದರಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿ, ಮಾರ್ಪಾಡುಗಳು ಮಾಡಿ ಈಗ ಪರಿಷ್ಕೃತ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಜಿಬಿಎ ವ್ಯಾಪ್ತಿಯಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಪಶ್ಚಿಮ ನಗರ ಪಾಲಿಕೆಗಳು ಸೇರಿದಂತೆ ಒಟ್ಟು ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 369 ವಾರ್ಡಗಳು ರಚನೆಯಾಗಿದೆ. ಜಿಬಿಎ ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ಪರಿಷ್ಕೃತ ಕರಡು ಮತದಾರರ ಪಟ್ಟಿಯಲ್ಲಿ 45,69,752 ಪುರುಷರು, 43,21,143 ಮಹಿಳೆಯರು ಹಾಗೂ 1,635 ಇತರೆ ಮತದಾರರು ಸೇರಿದಂತೆ ಒಟ್ಟು 88,92,528 ಮತದಾರರಿದ್ದಾರೆ. ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 8,024 ಮತಟ್ಟೆಗಳು ಬರಲಿವೆ ಎಂದು ಅವರು ವಿವರಿಸಿದರು.
ಜಿಬಿಎ ವ್ಯಾಪ್ತಿಯಲ್ಲಿ ಒಟು 369 ವಾರ್ಡ್‍ಗಳ ಪೈಕಿ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವಾರ್ಡ್ ಸಂಖ್ಯೆ 51-ಸುಭ್ರಮಣ್ಯಪುರ ಅತಿ ಹೆಚ್ಚು 54,026 ಮತದಾರರನ್ನು ಹೊಂದಿರುತ್ತದೆ. ಬೆಂಗಳೂರು ಪೂರ್ವ ನಗರಪಾಲಿಕೆಯ ವಾರ್ಡ್ ಸಂಖ್ಯೆ 16-ಕೊತ್ತೂರು ಅತಿ ಕಡಿಮೆ 10,940 ಮತದಾರರನ್ನು ಹೊಂದಿರುತ್ತದೆ ಎಂದು ಅವರು ಹೇಳಿದರು.
ಮತದಾರರ ಪಟ್ಟಿ ಸಿದ್ದಪಡಿಸುವಿಕೆಯ ಕಾರ್ಯಕ್ರಮದ ವೇಳಾ ಪಟ್ಟಿಯಂತೆ ಮಾ.10ರಿಂದ ಮಾ.16ರವರೆಗೆ ಹಕ್ಕುಗಳು ಮತ್ತು ಆಕ್ಷೇಪಣೆಗಳು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಪರಿಷ್ಕೃತ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲವಾಗಿದ್ದಲ್ಲಿ ಅಥವಾ ಮತ್ತೊಂದು ವಾರ್ಡ್ ವ್ಯಾಪ್ತಿಯಲ್ಲಿ ಹೆಸರು ಪ್ರಕಟವಾಗಿದ್ದಲ್ಲಿ ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ ಎಂದು ಅವರು ಹೇಳಿದರು.
ವೆಬ್ ಸೈಟ್ ನಲ್ಲಿ ಮತದಾರರ ಪಟ್ಟಿ: ಮತದಾರರು ವಾರ್ಡವಾರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಆನ್‍ಲೈನ್ ನಲ್ಲಿ ಎಪಿಕ್ ಸಂಖ್ಯೆ ಅಥವಾ ಅವರ ಹೆಸರಿನ ಮೂಲಕ ಹುಡುಕಲು ವ್ಯವಸ್ಥೆಯನ್ನು ಕಲ್ವಿಸುವ ನಿಟ್ಟಿನಲ್ಲಿ ವಾರ್ಡ್‍ವಾರು ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ಜಿಬಿಎ ಜಾಲತಾಣ https://gba.karnataka.gov.in/home ರಲ್ಲಿ ಪಿ.ಡಿ.ಎಫ್. ಆವೃತ್ತಿಯನ್ನು ಅಪ್ಲೋ ಡ್ ಮಾಡಲಾಗುವುದು.
ಬೂತ್ ಲೆವಲ್ ಏಜೆಂಟ್ ನೇಮಕ: ನೋಂದಾಯಿತ ಮತ್ತು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿ ವಾರ್ಡಿನ ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಲೆವಲ್ ಏಜೆಂಟ್ ನೇಮಕಾತಿ ಮಾಡಿ ಮತಗಟ್ಟೆ ಅಧಿಕಾರಿಗಳಿಗೆ ಎಲ್ಲ ಅರ್ಹ ಮತದಾರರ ನೋಂದಣಿ ಕಾರ್ಯದಲ್ಲಿ ಸಹಕಾರ ನೀಡಬೇಕು ಎಂದು ಅವರು ವಿವರಿಸಿದ್ದಾರೆ.







