ಬೆಂಗಳೂರು ಏರ್ಪೋರ್ಟ್ ನಲ್ಲಿ ಲ್ಯಾಂಡಿಂಗ್ ವೇಳೆ ರನ್ ವೇ ಗೆ ಅಪ್ಪಳಿಸಿದ ವಿಮಾನದ ಹಿಂಭಾಗ; 179 ಪ್ರಯಾಣಿಕರು ಪಾರು

ಏರ್ ಇಂಡಿಯಾ | Photo Credit : PTI
ಬೆಂಗಳೂರು: ದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸಿದ್ದ ಏರ್ ಇಂಡಿಯಾ ವಿಮಾನವು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ವಿಮಾನದ ಬಾಲಭಾಗ ನೆಲಕ್ಕೆ ತಾಗಿದ ಘಟನೆ ಬುಧವಾರ ನಡೆದಿದೆ.
ಮೇ 21ರಂದು ದಿಲ್ಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ AI2651 ವಿಮಾನ ಇಳಿಯುವಾಗ ಈ ಘಟನೆ ಸಂಭವಿಸಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ವಿಮಾನವು ಸುರಕ್ಷಿತವಾಗಿ ಇಳಿದಿದ್ದು, 179 ಪ್ರಯಾಣಿಕರು ಮತ್ತು ಸಿಬ್ಬಂದಿ ಯಾವುದೇ ತೊಂದರೆಯಿಲ್ಲದೆ ವಿಮಾನದಿಂದ ಇಳಿದಿದ್ದಾರೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
AI2651 ವಿಮಾನವು ಏರ್ಬಸ್ A321 ಮಾದರಿಯ ಕಿರಿದಾದ ದೇಹದ ವಿಮಾನವಾಗಿದೆ. ವಿಮಾನ ಇಳಿಯುತ್ತಿದ್ದ ವೇಳೆ ಮತ್ತೊಂದು ದೊಡ್ಡ ವಿಮಾನ ಟೇಕ್ಆಫ್ ಆಗಿದ್ದರಿಂದ ಗಾಳಿಯಲ್ಲಿ ಅಸ್ಥಿರತೆ ಉಂಟಾಗಿದೆ. ಇದರ ಪರಿಣಾಮ ಏರ್ಬಸ್ A321 ವಿಮಾನದ ಸಮತೋಲನದಲ್ಲಿ ವ್ಯತ್ಯಯ ಉಂಟಾಗಿ, ವಿಮಾನದ ಬಾಲಭಾಗ ನೆಲಕ್ಕೆ ತಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆಯ ನಂತರ ವಿಮಾನವನ್ನು ತಾಂತ್ರಿಕ ಪರಿಶೀಲನೆಗಾಗಿ ಸೇವೆಯಿಂದ ಹಿಂಪಡೆಯಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
“DGCA ಮಾರ್ಗಸೂಚಿಯಂತೆ ಘಟನೆ ಕುರಿತು ತನಿಖೆ ನಡೆಸಲಾಗುವುದು” ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಈ ಘಟನೆಯ ಬಳಿಕ ಬೆಂಗಳೂರಿನಿಂದ ದಿಲ್ಲಿಗೆ ತೆರಳಬೇಕಿದ್ದ AI2652 ವಿಮಾನವನ್ನು ರದ್ದುಗೊಳಿಸಲಾಗಿದೆ. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ವಿಮಾನ ನಿಲ್ದಾಣದಲ್ಲಿರುವ ಏರ್ ಇಂಡಿಯಾ ಸಿಬ್ಬಂದಿ ಅಗತ್ಯ ಸಹಾಯ ಒದಗಿಸುತ್ತಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.






