ಬೆಂಗಳೂರು: ಗಾಂಜಾ ಸರಬರಾಜು ಮಾಡುತ್ತಿದ್ದ ಮೂವರ ಬಂಧನ, 12 ಕೋಟಿ ರೂ. ಮೌಲ್ಯದ 1500 ಕೆಜಿ ಗಾಂಜಾ ಜಪ್ತಿ
'ಆಂಧ್ರಪ್ರದೇಶಕ್ಕೆ ತೆರಳಿ 3 ವಾರಗಳ ಕಾಲ ಕಾರ್ಯಾಚರಣೆ ನಡೆಸಿದ್ದ ಪೊಲೀಸರು'

ಬೆಂಗಳೂರು, ಜು.15: ಗೂಡ್ಸ್ ವಾಹನದಲ್ಲಿ ಆಂಧ್ರ, ಒಡಿಶಾ ಗಡಿ ಭಾಗಗಳಲ್ಲಿ ಸ್ಥಳೀಯರಿಂದ ಗಾಂಜಾ ಖರೀದಿಸಿ, ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ಸರಬರಾಜು ಮಾಡುತ್ತಿದ್ದ ಮೂವರನ್ನು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಈ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಆರೋಪಿಗಳಿಂದ 12ಕೋಟಿ ರೂ. ಮೌಲ್ಯದ 1,500 ಕೆಜಿ ಗಾಂಜಾವನ್ನು ವಶ ಪಡಿಸಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ಸಲ್ಮಾನ್, ಆತನಿಗೆ ಗಾಂಜಾ ಪೂರೈಸುತ್ತಿದ್ದ ರಾಜಸ್ಥಾನ ಮೂಲದ ಚಂದ್ರಭಾನ್ ಬಿಟ್ಟೋಯಿ ಹಾಗೂ ಆಂಧ್ರಪ್ರದೇಶ ಮೂಲದ ಲಕ್ಷ್ಮಿ ಮೋಹನ್ ದಾಸ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇತ್ತೀಚಿಗೆ ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿತನಾಗಿದ್ದ ಸಲ್ಮಾನ್ ಎಂಬ ಆರೋಪಿಯನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು, ವಿಚಾರಣೆ ನಡೆಸಿದಾಗ ಅಂತಾರಾಜ್ಯ ಮಾದಕ ಜಾಲ ಪತ್ತೆಯಾಗಿತ್ತು. ಬಳಿಕ ಆಂಧ್ರಪ್ರದೇಶದ ವಿಖಾಪಟ್ಟಣಂಗೆ ತೆರಳಿ ಮೂರು ವಾರಗಳ ಕಾಲ ಮಪ್ತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳಾದ ಚಂದ್ರಭಾನ್ ಬಿಟ್ಟೋಯಿ ಹಾಗೂ ಲಕ್ಷ್ಮಿ ಮೋಹನ್ ದಾಸ್‍ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಿ. ದಯಾನಂದ್ ಶ್ಲಾಘಿಸಿದ್ದಾರೆ.







