Bengaluru | ಎರಡನೇ ದಿನವೂ ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟ
ನಿಮ್ಮ ಗ್ಯಾರಂಟಿಗಳನ್ನು ನೀವೇ ಇಟ್ಟುಕೊಳ್ಳಿ, ನಮಗೆ ನ್ಯಾಯಯುತ ಗೌರವಧನ ನೀಡಿ : ಕೆ.ಉಮಾ

ಬೆಂಗಳೂರು : ಮಾಸಿಕ 15 ಸಾವಿರ ರೂ. ನಿಶ್ಚಿತ ಗೌರವಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಆಶಾ ಕಾರ್ಯಕರ್ತೆಯರು ನಗರದ ಫ್ರೀಡಂಪಾರ್ಕ್‍ನಲ್ಲಿ ಆರಂಭಿಸಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಎಸ್‍ಯುಸಿಐ(ಕಮ್ಯುನಿಸ್ಟ್) ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಉಮಾ, ಆಶಾ ಕಾರ್ಯಕರ್ತೆಯರು ದುಡಿಮೆಗೆ ತಕ್ಕ ವೇತನ ಕೇಳಿದರೆ ಸರಕಾರದ ಬಳಿ ಹಣವಿಲ್ಲ, ಈಗಾಗಲೇ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ ಎಂಬ ಉತ್ತರ ನೀಡಲಾಗುತ್ತಿದೆ. ಆದರೆ ಆಶಾ ಕಾರ್ಯಕರ್ತೆಯರು ನಿಮ್ಮ ಗ್ಯಾರಂಟಿಗಳನ್ನು ನೀವೇ ಇಟ್ಟುಕೊಳ್ಳಿ, ಎನ್‍ಎಚ್‍ಎಂ ಯೋಜನೆಯಡಿ ಬೆವರು ಸುರಿಸಿ ದುಡಿದಿದ್ದಕ್ಕೆ ನ್ಯಾಯಯುತವಾಗಿ ಸಲ್ಲಬೇಕಾದ ವೇತನ ನೀಡಿ ಎಂದರು.
ಹಣವಿಲ್ಲ ಎನ್ನುವ ರಾಜ್ಯ ಸರಕಾರದ ಹೊಸ ಹೊಸ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ವ್ಯಯಿಸಲು ಸಿದ್ಧವಿದೆ. ಮತ್ತೊಂದೆಡೆ ಕೇಂದ್ರ ಸರಕಾರ ದೊಡ್ಡ ಬಂಡವಾಳಿಗರ ಸುಮಾರು 17 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡುತ್ತಿದೆ. ಆದರೆ ಜನರ ಆರೋಗ್ಯ ರಕ್ಷಣೆಗಾಗಿ ಹಗಲಿರುಳು ದುಡಿಯುವ ಆಶಾ ಕಾರ್ಯಕರ್ತೆಯರಿಗೆ ನ್ಯಾಯಯುತ ಗೌರವಧನ ನೀಡಲು ಸರಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಈ ಸರಕಾರಗಳು ಕಾರ್ಪೊ ರೇಟ್ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿವೆ ಎಂದು ಉಮಾ ಆಕ್ರೋಶ ವ್ಯಕ್ತಪಡಿಸಿದರು.
ಎಐಯುಟಿಯುಸಿ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಮಾತನಾಡಿ, ರೈತರು, ಕಾರ್ಮಿಕರು, ಬುದ್ಧಿಜೀವಿಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ನಾಡಿನ ಎಲ್ಲ ಜನಸಮುದಾಯಗಳ ಬೆಂಬಲ ಆಶಾ ಕಾರ್ಯಕರ್ತೆಯರ ಹೋರಾಟಕ್ಕಿದೆ. ಆಶಾಗಳು ಆರೋಗ್ಯ ಇಲಾಖೆಯ ಆಧಾರಸ್ತಂಭಗಳಾಗಿದ್ದು, ಜನರ ಜೀವ ಉಳಿಸುವ ಮಹತ್ವದ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ ಅವರ ಶ್ರಮವನ್ನು ಸರಕಾರ ಕಡೆಗಣಿಸುತ್ತಿದೆ. ನೀವು ಕೇಳುತ್ತಿರುವುದು ಭಿಕ್ಷೆಯಲ್ಲ, ದುಡಿಮೆಗೆ ತಕ್ಕ ಪ್ರತಿಫಲ ಎಂದು ಹೇಳಿದರು.
ಶಿಕ್ಷಣ ತಜ್ಞ ನಿರಂಜನಾರಾಧ್ಯ ಮಾತನಾಡಿ, ಕೊಟ್ಟ ಮಾತನ್ನು ಉಳಿಸಿಕೊಳ್ಳದ ಸರಕಾರ ಲಜ್ಜೆಗೆಟ್ಟಿದೆ. ಸಂವಿಧಾನದ 21ನೇ ವಿಧಿಯು ಪ್ರತಿಯೊಬ್ಬ ಪ್ರಜೆಗೂ ಘನತೆಯ ಬದುಕು ಒದಗಿಸುವ ಆಶಯ ಹೊಂದಿದೆ. ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯದಂತಹ ಮೂಲಭೂತ ಅಗತ್ಯಗಳನ್ನು ಖಾತರಿಪಡಿಸಬೇಕಾದ ಸರಕಾರವೇ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ಗೌರವಧನ ನಿರಾಕರಿಸುತ್ತಿದೆ. ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ಸರಕಾರ ಅದರ ಆಶಯಗಳನ್ನೇ ಗಾಳಿಗೆ ತೂರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಂಡವಾಳಿಗರೊಂದಿಗೆ ಸರಕಾರ ಅಪವಿತ್ರ ಮೈತ್ರಿ ಮಾಡಿಕೊಂಡು ದುಡಿಯುವ ಜನರಿಗೆ ದ್ರೋಹ ಮಾಡುತ್ತಿದೆ. ಮಹಿಳೆಯರ ಪರವಾಗಿ ಮಾತನಾಡುವ ಸರಕಾರ ಮನೆಮನೆಗೆ ತೆರಳಿ ಬಿಸಿಲು-ಚಳಿಯೆನ್ನದೆ ದುಡಿಯುವ ಆಶಾ ಕಾರ್ಯಕರ್ತೆಯರಿಗೆ ಗೌರವಧನ ನೀಡಲು ಹಿಂದೇಟು ಹಾಕುತ್ತಿದೆ. ಮುಖ್ಯಮಂತ್ರಿಗಳ ಮನೆ ದುರಸ್ತಿಗೆ ತೆರಿಗೆ ಹಣ ವ್ಯಯಿಸುವ ಸರಕಾರಕ್ಕೆ ಆಶಾ ಕಾರ್ಯಕರ್ತೆಯರಿಗೆ ಗೌರವಧನ ನೀಡಲು ಹಣವಿಲ್ಲವೇ ಎಂದು ನಿರಂಜನಾರಾಧ್ಯ ಪ್ರಶ್ನಿಸಿದರು.
ಧರಣಿಯಲ್ಲಿ ಎಐಕೆಕೆಎಂಎಸ್ ರಾಜ್ಯಾಧ್ಯಕ್ಷ ಭಗವಾನ್ ರೆಡ್ಡಿ, ಎಐಸಿಎಸ್‍ಎಫ್ ರಾಜ್ಯ ಕಚೇರಿ ಕಾರ್ಯದರ್ಶಿ ಮಹಾಂತೇಶ ಬೀಳೂರು, ಎಐಡಿವೈಒ ರಾಜ್ಯ ಉಪಾಧ್ಯಕ್ಷ ವಿನಯ್ ಸಾರಥಿ, ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.






