ದೀರ್ಘಕಾಲ ಜಾಹೀರಾತು ಪ್ರದರ್ಶಿಸಿದ್ದಕ್ಕೆ ಪಿವಿಆರ್ ಚಿತ್ರಮಂದಿರಕ್ಕೆ ಬಿತ್ತು ದಂಡ!
ಬೆಂಗಳೂರು ಸಿನಿಮಾ ಪ್ರೇಕ್ಷಕನಿಗೆ ಕಾನೂನು ಹೋರಾಟದಲ್ಲಿ ಗೆಲುವು

ಸಾಂದರ್ಭಿಕ ಚಿತ್ರ (credit: Grok)
ಬೆಂಗಳೂರು: ಸಿನಿಮಾ ಪ್ರಾರಂಭಕ್ಕೂ ಮುನ್ನ, ದೀರ್ಘಕಾಲ ಜಾಹೀರಾತು ಪ್ರದರ್ಶಿಸಿದ್ದಕ್ಕೆ ಬೆಂಗಳೂರಿನ ಪಿವಿಆರ್ ಸಿನಿಮಾಸ್ ಗ್ರಾಹಕರ ನ್ಯಾಯಾಲಯದಿಂದ ದಂಡಕ್ಕೆ ಗುರಿಯಾಗಿದೆ. ಬೆಂಗಳೂರಿನ ಪ್ರೇಕ್ಷಕರೊಬ್ಬರು ಸಿನಿಮಾ ಪ್ರದರ್ಶನಕ್ಕೂ ಮುನ್ನ ದೀರ್ಘಕಾಲ ಜಾಹೀರಾತುಗಳನ್ನು ಪ್ರದರ್ಶಿಸಿ ನನ್ನ ಸಮಯವನ್ನು ವ್ಯರ್ಥ ಮಾಡಲಾಗಿದೆ ಎಂದು ಆರೋಪಿಸಿ, ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅವರ ಈ ಕಾನೂನು ಹೋರಾಟಕ್ಕೆ ಗೆಲುವು ಲಭಿಸಿದ್ದು, ಜಾಹೀರಾತು ಅವಧಿಯನ್ನು ಹೊರತುಪಡಿಸಿ ಸಿನಿಮಾ ಪ್ರದರ್ಶನಗೊಳ್ಳುವ ನೈಜ ಅವಧಿಯನ್ನು ಟಿಕೆಟ್ ಗಳಲ್ಲಿ ಮುದ್ರಿಸಬೇಕು ಎಂದು ಪಿವಿಆರ್ ಸಿನಿಮಾಸ್ ಗೆ ಗ್ರಾಹಕರ ನ್ಯಾಯಾಲಯ ಆದೇಶಿಸಿದೆ.
ಡಿಸೆಂಬರ್ 26, 2023ರಂದು ದೂರುದಾರ ಅಭಿಷೇಕ್ ಎಂ.ಆರ್. ಎಂಬವರು ‘ಸ್ಯಾಮ್ ಬಹದ್ದೂರ್’ ಸಿನಿಮಾ ವೀಕ್ಷಣೆಗೆಂದು ಪಿವಿಆರ್ ಸಿನಿಮಾಗೆ ತೆರಳಿದ್ದರು. ಸಿನಿಮಾ ಆರಂಭಗೊಳ್ಳುವ ಸಮಯ ಸಂಜೆ 4.05 ಗಂಟೆ ಎಂದಿದ್ದರೂ, ಸಿನಿಮಾ ಮಾತ್ರ ಸಂಜೆ 4.30 ಗಂಟೆಗೆ ಪ್ರಾರಂಭಗೊಂಡಿತ್ತು. ಉಳಿದ 25 ನಿಮಿಷಗಳ ಅವಧಿಯಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲಾಗಿತ್ತು. ಸಿನಿಮಾ ಪ್ರದರ್ಶನ ಮುಕ್ತಾಯಗೊಂಡ ನಂತರ, ಕೆಲಸಕ್ಕೆ ಮರಳಲು ಬಯಸಿದ್ದ ಅವರ ಯೋಜನೆಯನ್ನು ಈ ವಿಸ್ತರಿತ ಅವಧಿ ವ್ಯತ್ಯಯಗೊಳಿಸಿತ್ತು ಎಂದು ವರದಿಯಾಗಿದೆ. ಇದರಿಂದ ಕುಪಿತಗೊಂಡ ಅಭಿಷೇಕ್, ಪಿವಿಆರ್, INOX ಹಾಗೂ ಬುಕ್ ಮೈ ಶೋ ವಿರುದ್ಧ ಗ್ರಾಹಕರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. (ಪಿವಿಆರ್ ಹಾಗೂ INOX ಇತ್ತೀಚೆಗಷ್ಟೆ ವಿಲೀನಗೊಂಡಿದ್ದವು).
ಆದರೆ, ಪ್ರದರ್ಶನದ ವೇಳಾಪಟ್ಟಿಯ ಮೇಲೆ ಬುಕ್ ಮೈ ಶೋಗೆ ನಿಯಂತ್ರಣವಿರುವುದಿಲ್ಲವಾದ್ದರಿಂದ, ಈ ವ್ಯತ್ಯಯಕ್ಕೆ ಅದು ಹೊಣೆಯಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು, “ಈ ಹೊಸ ಯುಗದಲ್ಲಿ ಸಮಯವನ್ನು ಹಣ ಎಂದು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬರ ಸಮಯವೂ ಅಮೂಲ್ಯವಾಗಿದೆ. ಚಿತ್ರಮಂದಿರದಲ್ಲಿ 25-30 ನಿಮಿಷ ತಟಸ್ಥವಾಗಿ ಕುಳಿತುಕೊಳ್ಳುವುದು ಹಾಗೂ ಅನಗತ್ಯ ಜಾಹೀರಾತುಗಳನ್ನು ವೀಕ್ಷಿಸುವುದು ಗಮನಾರ್ಹ ಕಾಲಾವಧಿಯಾಗಿದೆ. ಬಿಗಿಯಾದ ವೇಳಾಪಟ್ಟಿ ಹೊಂದಿರುವ ಜನರಿಗೆ ವ್ಯರ್ಥ ಮಾಡುವಷ್ಟು ಸಮಯವಿರುವುದಿಲ್ಲ” ಎಂದು ತನ್ನ ಆದೇಶದಲ್ಲಿ ಹೇಳಿದೆ.
ಈ ನಡೆಯನ್ನು ಅನ್ಯಾಯಯುತ ವ್ಯಾಪಾರ ರೂಢಿ ಎಂದು ಪರಿಗಣಿಸಿದ ನ್ಯಾಯಾಲಯವು, ನಿಗದಿತ ಆರಂಭದ ವೇಳೆಗೆ ಮೇಲ್ಪಟ್ಟು ಜಾಹೀರಾತು ಪ್ರದರ್ಶಿಸುವುದನ್ನು ಸ್ಥಗಿತಗೊಳಿಸಬೇಕು ಎಂದು ಪಿವಿಆರ್ ಹಾಗೂ INOX ಗೆ ಆದೇಶಿಸಿದೆ.
ಆದರೆ, ತನ್ನ ಕ್ರಮವನ್ನು ಸಮರ್ಥಿಸಿಕೊಂಡ ಪಿವಿಆರ್ ಹಾಗೂ ಇನಾಕ್ಸ್, ಸಿನಿಮಾ ಪ್ರದರ್ಶನಪೂರ್ವ ಜಾಹೀರಾತುಗಳು ತಡವಾಗಿ ಆಗಮಿಸುವ ಪ್ರೇಕ್ಷಕರಿಗೆ ಸ್ಥಳಾವಕಾಶ ಒದಗಿಸುತ್ತವೆ ಹಾಗೂ ಸಾರ್ವಜನಿಕ ಸೇವೆ ಪ್ರಕಟಣೆಗಳನ್ನು ಹೊರಡಿಸುವುದು ಸಿನಿಮಾಗಳಿಗೆ ಅಗತ್ಯವಾಗಿದೆ ಎಂದು ವಾದಿಸಿದವು. ನ್ಯಾಯಾಲಯವು ಈ ವಾದವನ್ನು ಮಾನ್ಯ ಮಾಡಿತಾದರೂ, ಸಾರ್ವಜನಿಕ ಸೇವೆ ಪ್ರಕಟಣೆಗಳನ್ನು ಪ್ರದರ್ಶಿಸಲು ಸರಕಾರಿ ಮಾರ್ಗಸೂಚಿಗಳು 10 ನಿಮಿಷಗಳ ಅವಧಿಯ ಮಿತಿಯನ್ನು ವಿಧಿಸಿವೆ ಎಂಬುದರತ್ತ ಬೊಟ್ಟು ಮಾಡಿತು. ಅಲ್ಲದೆ, ‘ಸ್ಯಾಮ್ ಬಹದ್ದೂರ್’ ಸಿನಿಮಾದ ಪ್ರದರ್ಶನಕ್ಕೂ ಮುನ್ನ ಪ್ರದರ್ಶಿಸಲಾಗಿದ್ದ ಶೇ. 95ರಷ್ಟು ಜಾಹೀರಾತುಗಳು ಸರಕಾರಿ ಸಾರ್ವಜನಿಕ ಸೇವೆ ಪ್ರಕಟಣೆಗಳ ಬದಲು ವಾಣಿಜ್ಯ ಜಾಹೀರಾತುಗಳಾಗಿದ್ದವು ಎಂಬುದತ್ತಲೂ ಬೊಟ್ಟು ಮಾಡಿತು.
ಅಭಿಷೇಕ್ ಗೆ ಆಗಿರುವ ಮಾನಸಿಕ ಕಿರಿಕಿರಿ ಹಾಗೂ ಕಾನೂನು ವೆಚ್ಚಕ್ಕೆ ಪರಿಹಾರವಾಗಿ ಕ್ರಮವಾಗಿ 20,000 ರೂ. ಹಾಗೂ 8,000 ರೂ. ಪಾವತಿಸುವಂತೆ ಪಿವಿಆರ್ ಮತ್ತು INOX ಗೆ ನ್ಯಾಯಾಲಯ ಆದೇಶಿಸಿದೆ. ಇದರೊಂದಿಗೆ, ಅನ್ಯಾಯಯುತ ವ್ಯಾಪಾರ ರೂಢಿಯಲ್ಲಿ ತೊಡಗಿರುವುದಕ್ಕಾಗಿ ಒಂದು ಲಕ್ಷ ರೂ. ಹೆಚ್ಚುವರಿ ದಂಡವನ್ನೂ ವಿಧಿಸಿದೆ ಎಂದು Bar and Bench ವರದಿ ಮಾಡಿದೆ.







