ಬೆಂಗಳೂರಿನಲ್ಲಿ ತಮಿಳುನಾಡಿನ DMK ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು ಸೆ, 5: ತಮಿಳುನಾಡಿನ ಡಿಎಂಕೆ ನಾಯಕ ಎಂಕೆ ಅಳಗಿರಿಯ ಆಪ್ತ ಮಧುರೈನ ವಿಕೆ ಗುರುಸ್ವಾಮಿ ಮೂರ್ತಿ ಮೇಲೆ ಐದು ಜನರ ಗುಂಪು ಮಾರಕಾಸ್ತ್ರಗಳಿಂದ ದಾಳಿ ಮಾಡಿರುವುದು ವರದಿಯಾಗಿದೆ.
ಗುರುಸ್ವಾಮಿ ಅವರ ಸ್ಥಿತಿ ಗಂಭೀರವಾಗಿದ್ದು, ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಗುರುಸ್ವಾಮಿ ಅವರು ಕರುಣಾನಿಧಿ ಅವರ ಪುತ್ರ ಅಳಗಿರಿ ಆಪ್ತ ಎನ್ನಲಾಗಿದೆ.
ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮನಹಳ್ಳಿಯ ಸುಖಸಾಗರ್ ಹೋಟೆಲ್‌ನಲ್ಲಿ ಟೀ ಕುಡಿಯುತ್ತಿದ್ದ ವೇಳೆ ತಮಿಳುನಾಡಿನಿಂದ ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ಐವರು ಹೋಟೆಲ್ ಒಳಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆನ್ನಲಾಗಿದೆ.
ʼʼಗುರುಸ್ವಾಮಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಗುರುಸ್ವಾಮಿ ಹಾಗೂ ಎದುರಾಳಿ ಗುಂಪಿನ ನಡುವೆ ಕಳೆದ 35 ವರ್ಷಗಳಿಂದ ವೈಷಮ್ಯವಿತ್ತು. ಗುರುಸ್ವಾಮಿ ಅವರನ್ನು ಕೊಲೆ ಮಾಡಲು ಹಲವು ಬಾರಿ ಪ್ರಯತ್ನಿಸಲಾಗಿತ್ತು. ಸೋಮವಾರ ಹಿಂಬಾಲಿಸಿಕೊಂಡು ಬಂದು ಕೃತ್ಯ ಎಸಗಲಾಗಿದ್ದು, ಹೋಟೆಲ್‌ನ ಸಿಸಿ ಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಲಾಗಿದೆʼʼ ಎಂದು ಪೊಲೀಸರು ಹೇಳಿದರು.
ಸ್ಥಳಕ್ಕೆ ಪೂರ್ವ ವಿಭಾಗ ಡಿಸಿಪಿ ಭೀಮಾಶಂಕರ್ ಗಳೇದ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





