ಹಾಲಿನ ದರ ಲೀಟರ್ಗೆ 8 ರೂ. ಹೆಚ್ಚಳ | ಕಾಫೀ, ಚಹಾ ಸೇರಿ ಹಾಲಿನ ಆಹಾರಗಳ ಬೆಲೆ ಏರಿಕೆ ಅನಿವಾರ್ಯ: ಬೆಂಗಳೂರು ಹೊಟೇಲ್ಗಳ ಸಂಘ

ಸಾಂದರ್ಭಿಕ ಚಿತ್ರ Image by KamranAydinov on Magnific
ಬೆಂಗಳೂರು : ಕಾಫಿ, ಚಹಾ ಸೇರಿದಂತೆ ಹಾಲಿನಿಂದ ತಯಾರಾಗುವ ಎಲ್ಲಾ ಆಹಾರ ಮತ್ತು ಪಾನೀಯಗಳ ಬೆಲೆಯನ್ನು ಹೆಚ್ಚಿಸುವುದು ಅನಿವಾರ್ಯ ಎಂದು ಬೆಂಗಳೂರು ಹೊಟೇಲ್ಗಳ ಸಂಘ ತಿಳಿಸಿದೆ.
ಗುರುವಾರ ಬೆಂಗಳೂರು ಹೊಟೇಲ್ಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್, ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ ಎಸ್., ಗೌರವ ಕಾರ್ಯದರ್ಶಿ ವೀರೆಂದ್ರ ಎನ್.ಕಾಮತ್ ಅವರು ಈ ಕುರಿತು ಪ್ರಕಟಣೆ ನೀಡಿದ್ದಾರೆ.
ಇತಿಹಾಸದಲ್ಲೇ ಮೊದಲ ಬಾರಿಗೆ ಹಾಲಿನ ಬೆಲೆಯನ್ನು ಪ್ರತಿ ಲೀಟರ್ ಗೆ 8.0ರೂ. ಏಕಾಏಕಿ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನು ಕೇವಲ 2ರೂ.ದಿಂದ 3 ರೂ.ಗೆ ಸೀಮಿತಗೊಳಿಸಿದ್ದರೆ, ಹೊಟೇಲ್ಗಳಲ್ಲಿ ಕಾಫಿ, ಚಹಾ ಅಥವಾ ತಿಂಡಿ-ತಿನಿಸುಗಳ ಬೆಲೆ ಏರಿಕೆ ಮಾಡುವ ಅಗತ್ಯವಿರುತ್ತಿರಲಿಲ್ಲ. ಆದರೆ ಈಗ ಮಾಡಲು ಹೊರಟಿರುವ ಅತೀಯಾದ ಬೆಲೆ ಏರಿಕೆಯ ಪರಿಣಾಮವಾಗಿ ಕಾಫಿ, ಚಹಾ ಸೇರಿದಂತೆ ಹಾಲಿನಿಂದ ತಯಾರಾಗುವ ಎಲ್ಲಾ ಆಹಾರ ಮತ್ತು ಪಾನೀಯಗಳ ಬೆಲೆಯನ್ನು ಹೆಚ್ಚಿಸುವುದು ಅನಿವಾರ್ಯ ಎಂದು ತಿಳಿಸಿದ್ದಾರೆ.
ಹಾಲನ್ನು ಪೌಷ್ಠಿಕ ಆಹಾರವಾಗಿ ಉಪಯೋಗಿಸುವ ಜನಸಾಮಾನ್ಯರಿಗೆ, ಹಿರಿಯ ನಾಗರೀಕರಿಗೆ, ಗರ್ಭಿಣಿಯರಿಗೆ, ಮಕ್ಕಳಿಗೆ ಇದು ಬಹುದೊಡ್ಡ ಹೊಡೆತವಾಗಲಿದೆ. ನಮ್ಮ ಹೆಮ್ಮೆಯ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆ ಏರಿಕೆಯನ್ನು ಸೀಮಿತಗೊಳಿಸಿ ಇನ್ನೂ ಹೆಚ್ಚು ಉಪಯೋಗಿಸಲು ಸರಕಾರ ಪ್ರೋ ತ್ಸಾಹಿಸಬೇಕು ಎಂದು ತಿಳಿಸಿದ್ದಾರೆ.
ಸರಕಾರ ಡೈರಿ ಉದ್ಯಮದ ಆಡಳಿತಾತ್ಮಕ ವೆಚ್ಚವನ್ನು ಹತೋಟಿಗೆ ತರುವುದರ ಜೊತೆಗೆ ರೈತರಿಗೆ ಪ್ರೋ ತ್ಸಾಹ ಧನ ನೀಡುವ ಮೂಲಕ ಬೆಲೆ ಏರಿಕೆಯನ್ನು ಸೀಮಿತಗೊಳಿಸಬೇಕು. ಈ ರೀತಿಯ ದೊಡ್ಡ ಪ್ರಮಾಣದ ಬೆಲೆ ಏರಿಕೆ ಮಾಡುವಾಗ ಜನಸಾಮಾನ್ಯರ ಬಗ್ಗೆ ಚಿಂತನೆ ನಡೆಸುವುದು ಕೂಡ ಅತ್ಯಗತ್ಯ ಎಂದು ತಿಳಿಸಿದ್ದಾರೆ.
ಹಾಲಿನ ದರ ಏರಿಕೆಯ ಜೊತೆಗೆ ಇತ್ತೀಚೆಗೆ ದಿನದಿಂದ ದಿನಕ್ಕೆ ಅಕ್ಕಿಯ ಬೆಲೆ ಕೂಡ ಹೆಚ್ಚಳವಾಗುತ್ತಿದೆ. ಇದು ನಿಯಂತ್ರಣಕ್ಕೆ ಬಾರದ ಕಾರಣ ಹೊಟೇಲುಗಳಲ್ಲಿ ಕಾಫಿ, ಚಹಾ ತಿಂಡಿ-ತಿನಿಸುಗಳ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.






