ಸೈಬರ್ ಅಪರಾಧ ಪ್ರಕರಣದ ತನಿಖೆಗಾಗಿ ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರಿನ ಇನ್ಸ್ಪೆಕ್ಟರ್ ರವಿ ಅಪಘಾತದಲ್ಲಿ ಮೃತ್ಯು
ಮಧ್ಯಪ್ರದೇಶ ಪೊಲೀಸರಿಂದ ಗೌರವ ವಂದನೆ; ವಿಶೇಷ ವಿಮಾನದಲ್ಲಿ ರವಿ ಪಾರ್ಥಿವ ಶರೀರ ಬೆಂಗಳೂರಿಗೆ

ಕೆ.ಬಿ.ರವಿ (45)
ಬೆಂಗಳೂರು : ಸೈಬರ್ ಅಪರಾಧ ಪ್ರಕರಣವೊಂದರ ತನಿಖೆಗಾಗಿ ಮಧ್ಯ ಪ್ರದೇಶಕ್ಕೆ ತೆರಳಿದ್ದ ಬೆಂಗಳೂರಿನ ಪೊಲೀಸ್ ಇನ್ ಸ್ಪೆಕ್ಟರ್ ಒಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಬೆಂಗಳೂರು ನಗರದ ಆಗ್ನೇಯ ವಿಭಾಗದ ಸೈಬರ್ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ಕೆ.ಬಿ.ರವಿ (45) ಮೃತಪಟ್ಟವರು. ಈ ಅಪಘಾತದಲ್ಲಿ ಪಿಎಸ್ಸೈ ಸೇರಿದಂತೆ ಇನ್ನಿಬ್ಬರು ಗಾಯಗೊಂಡಿದ್ದಾರೆ.
ಇನ್ಸ್ಪೆಕ್ಟರ್ ಕೆ.ಬಿ. ರವಿ ಅವರ ಪಾರ್ಥಿವ ಶರೀರಕ್ಕೆ ಮಧ್ಯಪ್ರದೇಶ ಪೊಲೀಸರು ಗೌರವ ವಂದನೆ ಸಲ್ಲಿಸಿದರು. ಬಳಿಕ ವಿಶೇಷ ಚಾರ್ಟರ್ಡ್ ವಿಮಾನದ ಮೂಲಕ ಶನಿವಾರ ಬೆಂಗಳೂರಿಗೆ ತರಲಾಯಿತು.
ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ಪಾರ್ಥಿವ ಶರೀರವನ್ನು ಸ್ವೀಕರಿಸುವ ವೇಳೆ ರಾಜ್ಯ ಪೊಲೀಸ್ ಮುಖ್ಯಸ್ಥ ಎಂ.ಎ. ಸಲೀಂ ಹಾಜರಿದ್ದರು. ಸಿಐಡಿ ಡಿಜಿಪಿ ಪ್ರಣಬ್ ಮೊಹಂತಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.
ರವಿ ಅವರು ಪ್ರಯಾಣಿಸುತ್ತಿದ್ದ ಸ್ಲೀಪರ್ ಬಸ್ ಶುಕ್ರವಾರ ಬೆಳಿಗ್ಗೆ 8.30ರ ಸುಮಾರಿಗೆ ಮಧ್ಯಪ್ರದೇಶದ ರಾಜ್ಗಢ ಜಿಲ್ಲೆಯ ಬಿಯೋರಾ ಬೈಪಾಸ್ನ ಫ್ಲೈಓವರ್ ನಲ್ಲಿ ಅಪಘಾತಕ್ಕೀಡಾಗಿತ್ತು. ಲಕ್ನೋದಿಂದ ಇಂದೋರ್ಗೆ ತೆರಳುತ್ತಿದ್ದ ಬಸ್, ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ಸುರಕ್ಷತಾ ಗೋಡೆಗೆ ಢಿಕ್ಕಿ ಹೊಡೆದಿತ್ತು.
ಅಪಘಾತದ ವೇಳೆ ರವಿ ಅವರು ಬಸ್ ನ ಮೇಲಿನ ಬರ್ತ್ನಲ್ಲಿ ಮಲಗಿದ್ದರು. ಢಿಕ್ಕಿಯ ರಭಸಕ್ಕೆ ಬಸ್ ನ ಕಿಟಕಿಗಳು ಒಡೆದು, ಹಲವು ಪ್ರಯಾಣಿಕರು ಹೊರಕ್ಕೆ ಎಸೆಯಲ್ಪಟ್ಟಿದ್ದರು. ರವಿ ಅವರು ಫ್ಲೈಓವರ್ ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಅಪಘಾತದಲ್ಲಿ ರವಿ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡ ಇಬ್ಬರು ಬೆಂಗಳೂರು ಪೊಲೀಸ್ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಇತರ ಬೆಂಗಳೂರು ಪೊಲೀಸ್ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೊಬ್ಬ ಆರೋಪಿಯ ಬಂಧನಕ್ಕಾಗಿ ಅಲ್ಲೇ ಉಳಿದಿದ್ದರು:
ಸೈಬರ್ ಅಪರಾಧ ಪ್ರಕರಣವೊಂದರ ಆರೋಪಿಗಳ ಪತ್ತೆಗಾಗಿ ರವಿ ಸೇರಿದಂತೆ ನಾಲ್ವರು ಪೊಲೀಸ್ ಸಿಬ್ಬಂದಿ ಉತ್ತರ ಪ್ರದೇಶದ ಲಕ್ನೋಗೆ ತೆರಳಿದ್ದರು. ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.
ಮತ್ತೊಬ್ಬ ಆರೋಪಿಯ ಬಂಧನ ಬಾಕಿ ಇದ್ದುದರಿಂದ ರವಿ ಹಾಗೂ ಇತರ ಇಬ್ಬರು ಪೊಲೀಸ್ ಸಿಬ್ಬಂದಿ ಮಧ್ಯಪ್ರದೇಶದಲ್ಲೇ ಉಳಿದಿದ್ದರು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
‘ಆಗ್ನೇಯ ಸಿಇಎನ್ ಠಾಣೆಯ ತಂಡ ಸೈಬರ್ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶಕ್ಕೆ ತೆರಳಿ ಇಬ್ಬರು ಆರೋಪಿಗಳನ್ನು ಬಂಧಿಸಿತ್ತು. ತಂಡದ ಕೆಲವು ಸದಸ್ಯರು ಬೆಂಗಳೂರಿಗೆ ಮರಳಿದ್ದರು. ರವಿ ಹಾಗೂ ಇತರ ಇಬ್ಬರು ಮಧ್ಯಪ್ರದೇಶದಲ್ಲೇ ಉಳಿದಿದ್ದರು. ಮತ್ತೊಬ್ಬ ಆರೋಪಿಯನ್ನು ಹಿಡಿಯಲು ಅವರು ಅಲ್ಲಿಯೇ ಇದ್ದರು’ ಎಂದು ಸಿಂಗ್ ಹೇಳಿದ್ದಾರೆ.
►ಆಡುಗೋಡಿಯಲ್ಲಿ ಸಾರ್ವಜನಿಕ ದರ್ಶನ
ಬೆಂಗಳೂರಿಗೆ ತರಲಾದ ರವಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಆಡುಗೋಡಿಯಲ್ಲಿರುವ ಸಿಎಆರ್ (ದಕ್ಷಿಣ)ನ ರಂಗಮಂಟಪದಲ್ಲಿ ಇರಿಸಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳು, ಸಹೋದ್ಯೋಗಿಗಳು ಹಾಗೂ ಬಂಧುಗಳು ಅಂತಿಮ ನಮನ ಸಲ್ಲಿಸಿದರು.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕೋಣಸೂರು ಗ್ರಾಮದ ನಿವಾಸಿಯಾಗಿದ್ದ ರವಿ ಅವರ ಅಂತ್ಯಕ್ರಿಯೆ ಶನಿವಾರ ಹುಟ್ಟೂರಿನಲ್ಲಿ ನಡೆಯಿತು. ಅವರ 10 ವರ್ಷದ ಮಗಳು ಹಾಗೂ 7 ವರ್ಷದ ಮಗ ಅಂತ್ಯಕ್ರಿಯೆಯಲ್ಲಿ ಇದ್ದರು.
ಬೆಂಗಳೂರು ನಗರ ಪೊಲೀಸ್ ಈಶಾನ್ಯ ವಿಭಾಗದ ಡಿಸಿಪಿ ಮೊಹಮ್ಮದ್ ಸುಜೀತಾ, ಮೈಸೂರು ಜಿಲ್ಲಾ ಹೆಚ್ಚುವರಿ ಎಸ್ಪಿ ನಾಗೇಶ್ ಸೇರಿದಂತೆ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳ ಸುಮಾರು 25 ಇನ್ಸ್ಪೆಕ್ಟರ್ಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
►ಪಿಎಸ್ಐಯಿಂದ ಸೈಬರ್ ಠಾಣೆ ಇನ್ಸ್ಪೆಕ್ಟರ್ವರೆಗೆ
ರವಿ ಅವರು 2007ರ ಬ್ಯಾಚ್ನ ಪಿಎಸ್ಐ ಆಗಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು. ಇನ್ಸ್ಪೆಕ್ಟರ್ ಆಗಿ ಪದೋನ್ನತಿ ಪಡೆದ ಬಳಿಕ ಕೋರಮಂಗಲ, ಎಚ್ಎಸ್ಆರ್ ಲೇಔಟ್ ಮತ್ತು ಅಶೋಕನಗರ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಆಗ್ನೇಯ ವಿಭಾಗದ ಸೈಬರ್ ಠಾಣೆಯ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.






