Bengaluru | ಮೇ 31ಕ್ಕೆ ಐಪಿಎಲ್ ಫೈನಲ್: ಮಾರ್ಗಸೂಚಿ ಹೊರಡಿಸಿದ ಪೊಲೀಸರು

ಸಾಂದರ್ಭಿಕ ಚಿತ್ರ | PC : x/@RCBTweets
ಬೆಂಗಳೂರು : ಐಪಿಎಲ್ ಫೈನಲ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡ ತಲುಪಿದ್ದು, ಮೇ 31ರಂದು ನಡೆಯಲಿರುವ ಫೈನಲ್ ಪಂದ್ಯಾವಳಿಯ ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸರು ಸುರಕ್ಷಿತ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಲಾಗಿದೆ.
ಶುಕ್ರವಾರ ಈ ಬಗ್ಗೆ ಪ್ರಕಟನೆ ನೀಡಿರುವ ಪೊಲೀಸರು, ಸಾರ್ವಜನಿಕರು ಐಪಿಎಲ್ ಫೈನಲ್ ಪಂದ್ಯದ ಫಲಿತಾಂಶ ಬಂದ ನಂತರ, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಸಂಭ್ರಮಾಚರಣೆಗಳನ್ನು ಮಾಡುವಂತಿಲ್ಲ. ರಸ್ತೆಗಳಿಗೆ ಮುಖಮಾಡಿರುವ ಎಲ್ಇಡಿ ವಾಲ್ಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಇಲ್ಲದೆ ಅಳವಡಿಸಬಾರದು ಹಾಗೂ ಈಗಾಗಲೇ ಅಳವಡಿಸಿರುವ ಎಲ್ಇಡಿ ವಾಲ್ಗಳಲ್ಲಿ ಪಂದ್ಯವನ್ನು ಪ್ರಸಾರ ಮಾಡಬಾರದು ಎಂದು ತಿಳಿಸಿದ್ದಾರೆ.
ಪಟಾಕಿ ಸಿಡಿಸಬಾರದು, ಅಪಾಯಕಾರಿ ವಸ್ತುಗಳನ್ನು ಬಳಸಬಾರದು. ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಶಾಂತಿ ಮತ್ತು ಶಿಸ್ತು ಕಾಪಾಡುವುದು. ಸಂಚಾರ ಪೊಲೀಸರ ನೀಡುವ ಸಲಹೆ-ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು. ಬೈಕ್ ರ್ಯಾಲಿ, ಅತಿವೇಗ ಚಾಲನೆ, ಸ್ಟಂಟ್, ಹಾರ್ನ್ ದುರುಪಯೋಗ ಮತ್ತು ರಸ್ತೆ ತಡೆ ಮಾಡುವುದನ್ನು ನಿಷೇದಿಸಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಅಶಾಂತಿ ಸೃಷ್ಟಿಸುವುದು, ಜಗಳವಾಡುವುದು ಅಥವಾ ಅಸಭ್ಯವಾಗಿ ವರ್ತಿಸಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಪೋಸ್ಟ್, ದ್ವೇಷಪೂರಿತ ಸಂದೇಶ ಅಥವಾ ವದಂತಿಗಳನ್ನು ಹಂಚಬಾರದು. ಪಂದ್ಯ ಫಲಿತಾಂಶದ ಹೆಸರಿನಲ್ಲಿ ಇತರ ತಂಡದ ಅಭಿಮಾನಿಗಳನ್ನು ಪ್ರಚೋದಿಸುವುದು, ನಿಂದಿಸುವುದು ಅಥವಾ ಜಗಳಕ್ಕೆ ಕಾರಣವಾಗುವಂತೆ ವರ್ತಿಸಬಾರದು ಎಂದು ಪೊಲೀಸರು ಪ್ರಕಟನೆಯಲ್ಲಿ ಸೂಚಿಸಿದ್ದಾರೆ.






