Bengaluru | ಒಂದೇ ಕುಟುಂಬದ ಏಳು ಮಂದಿ ಹತ್ಯೆ ಪ್ರಕರಣ: ಸೇಲಂನಲ್ಲಿ ಎರಡು ಮೃತದೇಹ ಪತ್ತೆ

ಇಂದುಶೇಖರ್(52)
ಬೆಂಗಳೂರು : ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಒಂದೇ ಕುಟುಂಬದ ಏಳು ಜನರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಆರೋಪಿ ಇಂದುಶೇಖರನ ಪತ್ನಿ ಸುನೀತಾ ಹಾಗೂ ಸಂಬಂಧಿ ರೂಪವತಿ ಮೃತದೇಹಗಳನ್ನು ಪೊಲೀಸರು ಪತ್ತೆಹಚ್ಚಿರುವುದಾಗಿ ವರದಿಯಾಗಿದೆ.
ತಮಿಳುನಾಡಿನ ಸೇಲಂ ಘಾಟ್ನ ದಟ್ಟ ಅರಣ್ಯ ಪ್ರದೇಶದಲ್ಲಿ ಇಬ್ಬರ ಮೃತದೇಹಗಳು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮುಂದಿನ ಕಾನೂನು ಪ್ರಕ್ರಿಯೆ ಹಾಗೂ ಮರಣೋತ್ತರ ಪರೀಕ್ಷೆಗೆ ಸಿದ್ಧತೆ ನಡೆಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಮೃತರ ಕುಟುಂಬಸ್ಥರನ್ನು ಈಗಾಗಲೇ ಸೇಲಂಗೆ ಕರೆದೊಯ್ಯಲಾಗಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹಗಳನ್ನು ಅವರಿಗೆ ಹಸ್ತಾಂತರಿಸಲಾಗುತ್ತದೆ. ಇನ್ನು ಮೃತದೇಹಗಳು ತೀವ್ರವಾಗಿ ಕೊಳೆತ ಸ್ಥಿತಿಯಲ್ಲಿರುವುದರಿಂದ ಅಂತ್ಯಕ್ರಿಯೆಯನ್ನು ಸೇಲಂನಲ್ಲಿಯೇ ನೆರವೇರಿಸಬೇಕೇ ಅಥವಾ ಬೆಂಗಳೂರಿಗೆ ತಂದು ಅಂತಿಮ ವಿಧಿವಿಧಾನಗಳನ್ನು ನಡೆಸಬೇಕೇ ಎಂಬ ಬಗ್ಗೆ ಅಂತಿಮ ನಿರ್ಧಾರವನ್ನು ಕುಟುಂಬಸ್ಥರು ಕೈಗೊಳ್ಳುವುದಾಗಿ ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಮೃತದೇಹಗಳ ಪತ್ತೆಗಾಗಿ ಪೊಲೀಸರು ತನಿಖೆ ಹಾಗೂ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.






