Bengaluru | ಜಯನಗರದಲ್ಲಿ ಅರ್ಜಿ ʼನಮೂನೆ-7ʼ ದುರುಪಯೋಗ ಆರೋಪ: ಸೌಮ್ಯ ರೆಡ್ಡಿ ದೂರು

ಬೆಂಗಳೂರು : ಜಯನಗರ ಕ್ಷೇತ್ರದಲ್ಲಿ ಚುನಾವಣಾ ಆಯೋಗದ ನಮೂನೆ-7ಅನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ. ಹೀಗಾಗಿ ಜಯನಗರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಜಯನಗರದ ಮಾಜಿ ಶಾಸಕಿ ಮತ್ತು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಪೊಲೀಸ್ ದೂರು ದಾಖಲಿಸಿದ್ದಾರೆ.
ವಾರ್ಡ್ 171 (ಗುರ್ರಪನಪಾಳ್ಯ) ಒಂದರಲ್ಲೇ 4,327 ಕ್ಕೂ ಹೆಚ್ಚು ಮತದಾರರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ರೆಡ್ಡಿ ಆರೋಪಿಸಿದ್ದಾರೆ. ಕ್ಷೇತ್ರದಾದ್ಯಂತ ಮತದಾರರ ಹೆಸರುಗಳನ್ನು ಅಳಿಸಲು 5,698 ಫಾರ್ಮ್ -7 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಲೋಕೇಶ್ ಎಂಬ ವ್ಯಕ್ತಿಯ ಮುಂದಾಳತ್ವದಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಈ ವ್ಯಕ್ತಿಯು ಬಿಜೆಪಿ ಶಾಸಕ ರಾಮಮೂರ್ತಿ ಪರ ಕೆಲಸ ಮಾಡುತ್ತಿದ್ದಾನೆ. ಈ ಅಕ್ರಮಗಳಿಗೆ ಸಂಬಂಧಿಸಿದ ವೀಡಿಯೊ ಮತ್ತು ಛಾಯಾಚಿತ್ರ ಸಾಕ್ಷ್ಯಗಳು ತಮ್ಮ ಬಳಿ ಇವೆ. ಸಾಕ್ಷ್ಯಗಳನ್ನು ಪರಿಶೀಲಿಸಿ, ಯಾವುದೇ ಉಲ್ಲಂಘನೆ ಕಂಡುಬಂದರೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.




