ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತಕ್ಕೆ ಪ್ರಮುಖ ಕಾರಣ : ಪ್ರತ್ಯಕ್ಷದರ್ಶಿಗಳು ಹೇಳಿದ್ದು ಇಲ್ಲಿದೆ

PC | hindustantimes.com
ಬೆಂಗಳೂರು: ಉಚಿತ ಟಿಕೆಟ್ ನೀಡಲಾಗುತ್ತಿದೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್ ನಂ-7 ಕ್ರಿಕೆಟ್ ಪ್ರೇಮಿಗಳ ಪಾಲಿಗೆ ಸಾವಿನ ಬಲೆಯಾಗಿ ಪರಿಣಮಿಸಿತು ಎಂಬ ಅಂಶ ಇದೀಗ ಬಹಿರಂಗವಾಗಿದೆ.
ಆರ್ಸಿಬಿ ಮೊಟ್ಟಮೊಲದ ಬಾರಿಗೆ ಐಪಿಎಲ್ ಕಪ್ ಗೆದ್ದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಗೆ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಟಿಕೆಟ್ಗಾಗಿ ನೂಕುನುಗ್ಗಲು ಮಾಡಿದ್ದು, ಈ ಗೇಟ್ ಅವ್ಯವಸ್ಥೆಯ ಆಗರವಾಗಲು ಕಾರಣವಾಯಿತು ಎಂದು ತಿಳಿದುಬಂದಿದೆ.
"ಜನ ಸಂಪೂರ್ಣ ನಿಯಂತ್ರಣ ಕಳೆದುಕೊಂಡರು. ಇದು ವಿಕೋಪ" ಎಂದು ರಾಜಾಜಿನಗರದ ಅಚಿಮನ್ಯ ಹೇಳುತ್ತಾರೆ. 5.30ರ ಸುಮಾರಿಗೆ ದಿಢೀರನೇ ಮಳೆ ಆರಂಭವಾದದ್ದು ಪರಿಸ್ಥಿತಿ ಮತ್ತಷ್ಟು ಹದಗೆಡಲು ಕಾರಣವಾಯಿತು ಎಂದು ಅವರು ವಿವರಿಸಿದರು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 21 ಸ್ಟ್ಯಾಂಡ್ಗಳಿದ್ದು, 13 ಗೇಟುಗಳಿವೆ. ಗೇಟ್-9 ಮತ್ತು 10 ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಸದಸ್ಯರಿಗೆ ಮೀಸಲು. ಮುಖ್ಯ ಪ್ರವೇಶ ಮಾರ್ಗದ ಅಕ್ಕಪಕ್ಕದ 5,6,7,19 ಮತ್ತು 20ನೇ ಗೇಟ್ಗಳಲ್ಲಿ ಜನ ಕಿಕ್ಕಿರಿದು ಸೇರಿದ್ದರು. ಗರಿಷ್ಠ ಸಾವು ನೋವು ಸಂಭವಿಸಿದ್ದು ಏಳನೇ ಗೇಟ್ ಬಳಿ.
ಜನಸಮೂಹವನ್ನು ಸಮರ್ಪಕವಾಗಿ ನಿರ್ವಹಿಸದೇ ಇದ್ದುದು ಹಾಗೂ ನಗರದ ಎಲ್ಲೆಡೆ ವಿಜಯೋತ್ಸವ ಪರೇಡ್ ನಡೆಯಲು ಅನುಮತಿ ನೀಡುವ ವಿಚಾರದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳದೇ ಇದ್ದುದು ದುರಂತಕ್ಕೆ ಕೊಡುಗೆ ನೀಡಿತು.
"ನಾನು ತಡವಾಗಿ ಅಲ್ಲಿಗೆ ತಲುಪಿದ್ದರಿಂದ ಪ್ರಾಣ ಕಳೆದುಕೊಳ್ಳುವುದು ತಪ್ಪಿತು" ಎಂದು ದುರಂತದಲ್ಲಿ ಸಿಕ್ಕಿಹಾಕಿಕೊಂಡ ಸಿಂಚನಾ ಎನ್ (25) ಬಣ್ಣಿಸಿದರು. ಪೊಲೀಸರು ಜನಸಮೂಹವನ್ನು ನಿಯಂತ್ರಿಸುವ ಬದಲು ಕೇವಲ ಜನರನ್ನು ಅತ್ತಿಂದಿತ್ತ ತಳ್ಳಾಡುತ್ತಿದ್ದರು" ಎಂದು ಅವರು ಹೇಳಿದರು. ಆ್ಯಂಬುಲೆನ್ಸ್ಗಳ ಸುಗಮ ಸಂಚಾರಕ್ಕೂ ತಡೆ ಉಂಟಾದಾಗ ಪೊಲೀಸರು ಸಂಜೆ 6.30ರ ವೇಳೆಗೆ ಕಬ್ಬನ್ ಪಾರ್ಕ್ ಸರ್ಕಲ್ ಬಳಿ ಲಾಠಿಪ್ರಹಾರ ನಡೆಸಿದರು.







