Bengaluru | ಬೀದಿ ವ್ಯಾಪಾರಿಗಳ ಎತ್ತಂಗಡಿ ಖಂಡಿಸಿ ಜು.8ಕ್ಕೆ ‘ವಹಿವಾಟು ಬಂದ್’ ಮಾಡಿ ಪ್ರತಿಭಟನೆ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಬೀದಿ ವ್ಯಾಪಾರಿಗಳ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ದ ಅಧಿಕಾರಿಗಳು ನಡೆಸುತ್ತಿರುವ ಕಾನೂನುಬಾಹಿರ ಎತ್ತಂಗಡಿ ಖಂಡಿಸಿ, ಜು.8ರಂದು ‘ಬೀದಿ ವ್ಯಾಪಾರ ಬಂದ್’ ಹಾಗೂ ಬೃಹತ್ ಪ್ರತಿಭಟನೆಯನ್ನು ‘ಬೀದಿ ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿ’ವತಿಯಿಂದ ಹಮ್ಮಿಕೊಳ್ಳಲಾಗಿದೆ.
ಸೋಮವಾರ ಇಲ್ಲಿನ ಗಾಂಧಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿ ಮುಖಂಡ ವಿನಯ್ ಶ್ರೀನಿವಾಸ್, ‘ಬೀದಿ ವ್ಯಾಪಾರಿಗಳ ಎತ್ತಂಗಡಿ ಕಾರ್ಯಾಚರಣೆ ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ಇದನ್ನು ಕೂಡಲೇ ನಿಲ್ಲಿಸಬೇಕು. ಬಡವರ ಘನತೆಗೆ ಧಕ್ಕೆ ತರುವ ಸರಕಾರದ ನಡೆ ಖಂಡನೀಯ. ರಸ್ತೆಗಳಲ್ಲಿ ಪಾದಚಾರಿಗಳು-ಬೀದಿ ವ್ಯಾಪಾರಿಗಳು ಇಬ್ಬರೂ ಸಹಜೀವನ ನಡೆಸಲು ಸಾಧ್ಯವಿದೆ. ನಮ್ಮ ನಡುವೆ ವೈರತ್ವ ತರಬೇಡಿ’ ಎಂದು ಕೋರಿದರು.
‘ನಗರದ ಜನರಿಗೆ ಉತ್ತಮ ಸರಕುಗಳನ್ನು ಅಗ್ಗದ ಬೆಲೆಯಲ್ಲಿ ನೀಡುವ ಮೂಲಕ ಲಕ್ಷಾಂತರ ಕುಟುಂಬಗಳ ಸ್ವಾವಲಂಬಿ ಬದುಕಿಗೆ ಆಧಾರವಾಗಿರುವ ಬೀದಿ ವ್ಯಾಪಾರವನ್ನು ಕಡೆಗಣಿಸಲಾಗುತ್ತಿದೆ. ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ, ‘ಮುಖ್ಯರಸ್ತೆಗಳಲ್ಲಿ, ಪ್ರಮುಖ ಜಂಕ್ಷನ್‍ಗಳಲ್ಲಿ ಬೀದಿ ವ್ಯಾಪಾರಕ್ಕೆ ಜಾಗವಿಲ್ಲ’ ಎಂದು ಮೌಖಿಕ ಆದೇಶ ನೀಡಿದ್ದನ್ನೇ ನೆಪವಾಗಿಸಿಕೊಂಡ ಅಧಿಕಾರಿಗಳು, ಯಾವುದೇ ಮುನ್ಸೂಚನೆ ನೀಡಿದೆ ಜೆಸಿಬಿಗಳೊಂದಿಗೆ ಬಂದು ವ್ಯಾಪಾರಿಗಳ ಗಾಡಿ, ಸರಕುಗಳನ್ನು ನಾಶಪಡಿಸುವುದು ಸರಿಯಲ್ಲ’ ಎಂದು ಅವರು ಆಕ್ಷೇಪಿಸಿದರು.
‘ಸುಪ್ರೀಂ ಕೋರ್ಟ್ ಬೀದಿ ವ್ಯಾಪಾರ ಮೂಲಭೂತ ಹಕ್ಕು ಎಂದು ಘೋಷಿಸಿದೆ. ಅಲ್ಲದೆ, ಬೀದಿ ವ್ಯಾಪಾರಿಗಳ ಹಕ್ಕುಗಳ ರಕ್ಷಣೆಗಾಗಿಯೇ 2014ರಲ್ಲಿ ಕಾಯ್ದೆ ತರಲಾಗಿದೆ. ನಗರದಲ್ಲಿ 1.50ಲಕ್ಷ ಮಂದಿ ಬೀದಿ ವ್ಯಾಪಾರಿಗಳಿದ್ದು, ಆಪೈಕಿ 80ಸಾವಿರ ಜನರಿಗೆ ‘ಪಿಎಂ-ಸ್ವನಿಧಿ’ ಯೋಜನೆಯಡಿ ಸಾಲ ನೀಡಿದ್ದಾರೆ. ಆದರೆ, ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಕೇವಲ 34 ಸಾವಿರ ವ್ಯಾಪಾರಿಗಳನ್ನು ಮಾತ್ರ ಗುರುತಿಸಿ, ಲಕ್ಷಾಂತರ ಜನರನ್ನು ಸಮೀಕ್ಷೆಯಿಂದ ಹೊರಗಿಡಲಾಗಿದೆ. ಗುರುತಿನ ಚೀಟಿ ನೀಡುವಲ್ಲಿ ವಿಫಲವಾಗಿರುವ ಅಧಿಕಾರಿಗಳು, ಇದೀಗ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ ಎಂದು ವಿನಯ್ ಶ್ರೀನಿವಾಸ ಕಿಡಿಕಾರಿದರು.
2014ರ ಕಾಯ್ದೆ ಅನ್ವಯ ಸಮೀಕ್ಷೆ ಪೂರ್ಣಗೊಂಡು ಎಲ್ಲರಿಗೂ ಪ್ರಮಾಣಪತ್ರ ಸಿಗುವವರೆಗೂ ಯಾರನ್ನೂ ಎತ್ತಂಗಡಿ ಮಾಡುವಂತಿಲ್ಲ. ಆದರೂ, ಈ ನಿಯಮವನ್ನು ಉಲ್ಲಂಘಿಸಲಾಗಿದೆ. ‘ನೋ-ವೆಂಡಿಂಗ್ ಜೋನ್’ ಘೋಷಿಸಲು ಪಟ್ಟಣ ವ್ಯಾಪಾರ ಸಮಿತಿಯ ಶಿಫಾರಸು ಕಡ್ಡಾಯ. ಆದರೆ, ನಗರಾಭಿವೃದ್ಧಿ ಸಚಿವರು ಏಕಾಏಕಿ ಮುಖ್ಯರಸ್ತೆಗಳನ್ನು ‘ನೋ-ವೆಂಡಿಂಗ್ ಜೋನ್’ ಎಂದು ಘೋಷಿಸಿ, ಪರ್ಯಾಯ ಸ್ಥಳ ನೀಡದೆ ಎತ್ತಂಗಡಿ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಕನಿಷ್ಟ ಪಕ್ಷ ನೋಟಿಸ್ ಅನ್ನು ನೀಡದೆ ಜಯನಗರ, ವಿಜಯನಗರ, ಮಾರತಹಳ್ಳಿ, ಮಲ್ಲೇಶ್ವರ ಹಾಗೂ ರಾಜರಾಜೇಶ್ವರಿ ನಗರ ಸೇರಿದಂತೆ ವಿವಿಧೆಡೆಗಳಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ತೆರವು ಮಾಡಲಾಗಿದೆ. ಸರಕು ಜಪ್ತಿ ಮಾಡಿ ರಸೀದಿ ನೀಡಬೇಕು. ಆದರೆ, ಯಾವುದೇ ರಸೀದಿ ನೀಡದೆ ಗಾಡಿಗಳನ್ನು ಜಪ್ತಿ ಮಾಡಿರುವುದು ಕಳ್ಳತನಕ್ಕೆ ಸಮಾನ ಎಂದು ಅವರು ಅವರು ಆಕ್ರೋಶ ವ್ಯಕ್ತಪಡಿಸಿದರು.
ಜು.8ರ ಬೆಳಗ್ಗೆಯಿಂದಲೇ ಬೆಂಗಳೂರು ನಗರದ ಎಲ್ಲ ಬೀದಿ ವ್ಯಾಪಾರಿಗಳು ತಮ್ಮ ವ್ಯಾಪಾರ, ವಹಿವಾಟು ಸಂಪೂರ್ಣ ಬಂದ್ ಮಾಡಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಾಲ್ಕೈದು ಸಾವಿರ ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬೀದಿ ವ್ಯಾಪಾರಿಗಳ ಸಂಘದ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಬಸಮ್ಮ, ಸುರೇಶ್, ಕೇಶವ್, ರಾಜಣ್ಣ ಸೇರಿದಂತೆ ಹಲವು ಪ್ರತಿನಿಧಿಗಳು ಹಾಜರಿದ್ದರು.
ಹಕ್ಕೋತ್ತಾಯಗಳು: ಒಕ್ಕಲೆಬ್ಬಿಸಿದ ಬೀದಿ ವ್ಯಾಪಾರಿಗಳನ್ನು ಅದೇ ಸ್ಥಳದಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕು. ಒಂದು ವೇಳೆ ಪಾದಚಾರಿ ಮಾರ್ಗಕ್ಕೆ ಅಡ್ಡವಿದ್ದರೆ, ತಾತ್ಕಾಲಿಕವಾಗಿ ರಸ್ತೆಬದಿಯಲ್ಲಿ ವ್ಯಾಪಾರ ಮಾಡಲು ಬಿಡಬೇಕು. ಬೀದಿ ವ್ಯಾಪಾರಿಗಳ ಕಾಯ್ದೆಯನ್ನು ಸಂಪೂರ್ಣ ಜಾರಿಗೆ ತರಬೇಕು. ಸಮೀಕ್ಷೆ ನಡೆಸಿ ಎಲ್ಲರಿಗೂ ಗುರುತಿನ ಚೀಟಿ ನೀಡಬೇಕು. ‘ಟೌನ್ ವೆಂಡಿಂಗ್ ಸಮಿತಿ’ ರಚಿಸಿ ಪ್ರತಿನಿಧಿತ್ವವನ್ನು ಖಚಿತಪಡಿಸಬೇಕು. ಪಾದಚಾರಿ ಮಾರ್ಗಗಳನ್ನು ಅಗಲ ಮಾಡಿ ಪಾದಚಾರಿ ಹಾಗೂ ವ್ಯಾಪಾರಿಗಳಿಗೂ ಜಾಗ ನೀಡಬೇಕು. ನಿಜವಾದ ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಬೀದಿ ವ್ಯಾಪಾರಿಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ನ್ಯಾಯಯುತವಾಗಿ ಅವರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಲಾಗಿದೆ.
...............






