ಬೆಂಗಳೂರು: ರಾತ್ರಿ ವೇಳೆ ಸುಲಿಗೆ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿದ ಪೊಲೀಸರು

ಬೆಂಗಳೂರು: ಪಾದಚಾರಿ ಹಾಗೂ ವಾಹನ ಸವಾರರನ್ನು ಗುರಿಯಾಗಿಸಿಕೊಂಡು ಮಾರಕಾಸ್ತ್ರಗಳಿಂದ ಬೆದರಿಸಿ ನಗದು, ಮೊಬೈಲ್, ಚಿನ್ನಾಭರಣ ದೋಚುತ್ತಿದ್ದ ಬರೋಬ್ಬರಿ ಏಳು ಪ್ರಕರಣಗಳನ್ನು ಭೇದಿಸಿರುವ ಪೂರ್ವ ವಿಭಾಗದ ಪುಲಿಕೇಶಿ ನಗರ ಠಾಣಾ ಪೊಲೀಸರು 1.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿ ಹಲವರನ್ನು ಬಂಧಿಸಿದ್ದಾರೆ.
ಉಸ್ಮಾನ್ ಪಾಷಾ, ಸೂರ್ಯ, ಇರ್ಫಾನ್, ಜೀವ ಎಂಬುವರು ಇತ್ತೀಚಿಗೆ ಪುಲಿಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆವೊಂದರಲ್ಲಿ ಬೈಕ್‍ಗಳಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಪಾದಚಾರಿಗಳನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡಲು ಹೊಂಚು ಹಾಕುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ ಪುಲಿಕೇಶಿ ನಗರ ಠಾಣೆಯ ಇನ್‍ಸ್ಪೆಕ್ಟರ್ ಸೋಮಶೇಖರ್, ಪಿಎಸ್ ಐ ಮುಹಮ್ಮದ್ ಅಲಿ ಇಮ್ರಾನ್ ನೇತೃತ್ವದ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಭೇದಿಸಿದ್ದಾರೆ.
ವಿಚಾರಣೆ ಸಂದರ್ಭದಲ್ಲಿ ಇಲ್ಲಿನ ಡೇವಿಸ್ ರಸ್ತೆಯ ಸಿಗ್ನಲ್ ಬಳಿ ಸ್ವಿಗ್ಗಿ ಡೆಲಿವರಿ ಬಾಯ್ ಅನ್ನು ತಡೆದು ಆತನ ಮೊಬೈಲ್ ಹಾಗೂ ಹಣವನ್ನು ಸುಲಿಗೆ ಮಾಡಿದ್ದ ವಿಚಾರ ಗೊತ್ತಾಗಿದೆ. ಹೀಗೆ, ಹಲವು ಪಾದಚಾರಿಗಳನ್ನು ಗುರಿಯಾಗಿಸಿಕೊಂಡು ಸುಲಿಗೆ ಮಾಡಿರುವ ಮಾಹಿತಿ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾರೆ. ಸದ್ಯ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಬೈಕ್, ಮೊಬೈಲ್, ನಗದು ಜಪ್ತಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.





