ಬೆಂಗಳೂರು: ಐಫೋನ್ ಕೊಡಿಸಲು ನಿರಾಕರಿಸಿದ್ದಕ್ಕೆ ಮನೆ ಬಿಟ್ಟು ಗೋವಾಕ್ಕೆ ತೆರಳಿದ್ದ ಬಾಲಕರಿಬ್ಬರು ಪತ್ತೆ!

ಸಾಂದರ್ಭಿಕ ಚಿತ್ರ
ಬೆಂಗಳೂರು, ಸೆ.10: ಪೋಷಕರು ಐಫೋನ್ ಕೊಡಿಸಲು ನಿರಾಕರಿಸಿದರು ಎಂದು ಬೇಸರ ಮಾಡಿಕೊಂಡು ಮನೆ ಬಿಟ್ಟು ತೆರಳಿದ್ದ ಬಾಲಕರಿಬ್ಬರನ್ನು ಇಲ್ಲಿನ ಸಂಜಯನಗರ ಠಾಣಾ ಪೊಲೀಸರು ಪತ್ತೆ ಹಚ್ಚಿರುವ ಬಗ್ಗೆ ವರದಿಯಾಗಿದೆ.
ಸೆ.1ರಂದು ಭೂಪಸಂದ್ರದಿಂದ ನಾಪತ್ತೆಯಾಗಿದ್ದ ಇಬ್ಬರು ಬಾಲಕರನ್ನು ಪೊಲೀಸರು ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ. ನಾಗಶೆಟ್ಟಿಹಳ್ಳಿಯಲ್ಲಿ ಪೋಷಕರೊಂದಿಗೆ ವಾಸವಿದ್ದ ಬಾಲಕನೊಬ್ಬ ಭೂಪಸಂದ್ರದ ಮದರಸಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಈ ಬಾಲಕನ ಪೋಷಕರು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.
ಪೋಷಕರು ಬಾಲಕನಿಗೆ ಒಂದು ಸ್ಮಾರ್ಟ್ಫೋನ್ ಕೊಡಿಸಿದ್ದರು. ಈತನ ಸ್ನೇಹಿತನೂ ಮೊಬೈಲ್ ಬಳಕೆ ಮಾಡುತ್ತಿದ್ದ. ಸಾಮಾಜಿಕ ಜಾಲತಾಣದಲ್ಲಿ ಬರುವ ಜಾಹೀರಾತು, ರೀಲ್ಸ್ ಗಳನ್ನು ನೋಡಿದ್ದ ಈ ಬಾಲಕರಿಬ್ಬರು ತಾವೂ ಐಫೋನ್ ಖರೀದಿಸುವ ಆಲೋಚನೆ ಮಾಡಿದ್ದರು ಎಂದು ಹೇಳಲಾಗಿದೆ.
ಮೊದಲು ಐಫೋನ್ ಕೊಡಿಸುವಂತೆ ಪೋಷಕರ ಬಳಿ ಕೇಳಿದ್ದರು. ಆದರೆ ದುಬಾರಿ ಬೆಲೆಯ ಐಫೋನ್ ಕೊಡಿಸಲು ಪೋಷಕರು ನಿರಾಕರಿಸಿದ್ದರು. ಆಗ ಬಾಲಕರು ತಮ್ಮ ಪೋಷಕರ ಬಳಿ ನಾವು ಮುಂಬೈಗೆ ಹೋಗಿ ದುಡಿದು ಐಫೋನ್ ಕೊಳ್ಳುತ್ತೇವೆ ಎಂದಿದ್ದರಂತೆ. ಆ ಸಮಯದಲ್ಲಿ ಪೋಷಕರು ಸಹ ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಹೇಗಾದರೂ ಸರಿ ಐಫೋನ್ ಖರೀದಿಸಲೇಬೇಕು ಎಂದು ನಿರ್ಧರಿಸಿದ್ದ ಬಾಲಕರಿಬ್ಬರು ಪೋಷಕರ ಕಣ್ತಪ್ಪಿಸಿ ಮನೆಯಿಂದ ಹೊರಟು ಮುಂಬೈ ಬದಲು ಗೋವಾಕ್ಕೆ ತೆರಳಿದ್ದರು ಎನ್ನಲಾಗಿದೆ.
ಎಷ್ಟೇ ಹುಡುಕಿದರು ಬಾಲಕರು ಪತ್ತೆಯಾಗದಿದ್ದಾಗ ಪೋಷಕರು ಸಂಜಯನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಎಲ್ಲಾ ಕಡೆ ಮಾಹಿತಿ ರವಾನಿಸಿದ್ದರು. ಬಳಿಕ ಗೋವಾ ಪೊಲೀಸರಿಂದ ಬಂದ ಮಾಹಿತಿ ಆಧರಿಸಿ ಬಾಲಕರಿಬ್ಬರನ್ನು ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.







