772 ಡ್ರೈವಿಂಗ್ ಲೈಸೆನ್ಸ್ ಅಮಾನತುಗೊಳಿಸಿದ ಬೆಂಗಳೂರು ಸಂಚಾರ ಪೊಲೀಸರು..!

ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.15: ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ ಕಳೆದ ಒಂಭತ್ತು ತಿಂಗಳಿನಲ್ಲಿ 772 ಜನರ ಡ್ರೈವಿಂಗ್ ಲೈಸೆನ್ಸ್ ಅಮಾನತುಗೊಳಿಸಿರುವುದಾಗಿ ಬೆಂಗಳೂರು ಸಂಚಾರ ಪೊಲೀಸರು ಹೇಳಿದ್ದಾರೆ.
ಭಾರೀ ಸದ್ದು ಮಾಡುವ ಸೈಲೆನ್ಸರ್ ಗಳಂತಹ ಅಕ್ರಮ ಪರಿಕರಗಳ ಅಳವಡಿಕೆಗಾಗಿ ಎಂಟು ವಾಹನಗಳ ನೋಂದಣಿ ಪ್ರಮಾಣಪತ್ರಗಳನ್ನು (ಆರ್ಸಿ) ಸಾರಿಗೆ ಅಮಾನತುಗೊಳಿಸಿದೆ. ವಿವಿಧ ರೀತಿಯ ಉಲ್ಲಂಘನೆಗಳಿಗಾಗಿ 1,700 ಪರವಾನಗಿಗಳನ್ನು ಅಮಾನತುಗೊಳಿಸಲು ಸಂಚಾರ ಇಲಾಖೆಗೆ ಶಿಫಾರಸು ಮಾಡಿರುವುದಾಗಿ ಬೆಂಗಳೂರು ನಗರ ಜಂಟಿ ಪೊಲೀಸ್ (ಸಂಚಾರ), ಎಂಎನ್ ಅನುಚೇತ್ ತಿಳಿಸಿದ್ದಾರೆ.
ಇನ್ನೂ, ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಕ್ಕಾಗಿ, ವ್ಹೀಲಿಂಗ್ ಮತ್ತು ಅಪಾಯಕಾರಿ ಚಾಲನೆ ಸೇರಿದಂತೆ ವಿವಿಧ ಕಾರಣಗಳಿಂದ 772 ಜನರ ಡ್ರೈವಿಂಗ್ ಲೈಸೆನ್ಸ್ ಅಮಾನತು ಮಾಡಲಾಗಿದೆ. ಇದಲ್ಲದೆ, ವಾಹನಗಳ ಮಾರ್ಪಾಡು ಮತ್ತು ಇತರರಿಗೆ ತೊಂದರೆಯಾಗುವ ಶಬ್ದದ ಸೈಲೆನ್ಸರ್ ಗಳನ್ನು ಅಳವಡಿಸಿದ್ದ ಕಾರಣ ಸಂಚಾರ ವಿಭಾಗವು ಎಂಟು ಆರ್ಸಿಗಳನ್ನು ರದ್ದುಗೊಳಿಸಿದೆ ಎಂದು ಅವರು ವಿವರಿಸಿದರು.
ಶೇ.50 ರಷ್ಟು ಪ್ರಕರಣಗಳಲ್ಲಿ, ಅಪ್ರಾಪ್ತ ವಯಸ್ಕರು ವ್ಹೀಲಿಂಗ್ ಮತ್ತು ಅಪಾಯಕಾರಿ ಚಾಲನೆಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬಂದಿದೆ. ಪ್ರತಿ ವಾಹನ ಮಾಲಕರಿಗೆ 25ಸಾವಿರ ರೂ.ಗಳ ವರೆಗೆ ದಂಡ ವಿಧಿಸಲಾಗಿದೆ ಎಂದು ಅನುಚೇತ್ ಹೇಳಿದ್ದಾರೆ.







