10 ಸಾವಿರ ‘ಭಾರತ್ ಜೋಡೋ ಯುವ ಸಂಘ’ ಸ್ಥಾಪಿಸಲು ಸರಕಾರ ಆದೇಶ: ಮಾರ್ಗಸೂಚಿ ಬಿಡುಗಡೆ

ಬೆಂಗಳೂರು : ರಾಜ್ಯದಲ್ಲಿ 10 ಸಾವಿರ ‘ಭಾರತ್ ಜೋಡೋ ಯುವ ಸಂಘ’ಗಳನ್ನು ಸ್ಥಾಪಿಸುವ ಕುರಿತಂತೆ ಕೆಲವು ಮಾರ್ಗಸೂಚಿಗಳನ್ನು ನೀಡಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ.
ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮುದಾಯಿಕ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸುವ ದೃಷ್ಠಿಯಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಾಸರಿ 6000 ಸಂಘಗಳನ್ನು ಹಾಗೂ ನಗರ ವಾರ್ಡ್ಗಳ ವ್ಯಾಪ್ತಿಯಲ್ಲಿ ಸರಾಸರಿ 4000 ಸಂಘಗಳನ್ನು ಹೀಗೆ ಒಟ್ಟು 10,000 ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸರಕಾರ ಈ ಯೋಜನೆಗಾಗಿ ವಾರ್ಷಿಕ ಒಟ್ಟು ರೂ. 1010 ಕೋಟಿ ಬಜೆಟ್ ಮೀಸಲಿಟ್ಟಿದೆ. ಇದರಲ್ಲಿ ಪ್ರತಿ ಸಂಘಕ್ಕೆ ವಾರ್ಷಿಕವಾಗಿ 10 ಲಕ್ಷ ರೂಪಾಯಿ ಅನುದಾನ ಸಿಗಲಿದೆ. ಆದರೆ, ಈ 10 ಲಕ್ಷ ರೂಪಾಯಿ ನೇರವಾಗಿ ಒಟ್ಟಿಗೆ ಸಿಗುವುದಿಲ್ಲ. ಇದನ್ನು ಮೂರು ಕಂತುಗಳಲ್ಲಿ ನಿಮ್ಮ ಸಂಘದ ಬ್ಯಾಂಕ್ ಅಕೌಂಟ್‌ಗೆ ಜಮೆ ಮಾಡಲಾಗುತ್ತದೆ. ಜೊತೆಗೆ, ಪ್ರತಿಯೊಂದು ಸಂಘದ ಒಬ್ಬ ತರಬೇತುದಾರರಿಗೆ ವಾರ್ಷಿಕ ತಲಾ 24,000 ರೂ. ಗೌರವಧನ ನೀಡಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಕಂದಾಯ ಸಚಿವ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಯುವಜನರಲ್ಲಿ ಕ್ರೀಡೆ, ಸಂಸ್ಕೃತಿ, ವೈಜ್ಞಾನಿಕ ಮನೋಭಾವ ಹಾಗೂ ಸಾಮಾಜಿಕ ಸಾಮರಸ್ಯವನ್ನು ಉತ್ತೇಜಿಸಲು ಗ್ರಾಮ ಪಂಚಾಯಿತಿ ಮತ್ತು ನಗರ ವಾರ್ಡ್ಗಳ ವ್ಯಾಪ್ತಿಯಲ್ಲಿ 10 ಸಾವಿರ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲು ಅಧಿಕೃತ ಆದೇಶವನ್ನು ಹೊರಡಿಸಿದ್ದೇವೆ ಎಂದಿದ್ದಾರೆ.
ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸಂಘ, ಪ್ರತಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಾಸರಿ 4 ಸಾವಿರ ಜನಸಂಖ್ಯೆಗೆ ಒಂದು ಸಂಘ, ಪ್ರತಿ ಪುರಸಭೆಯಲ್ಲಿ ಸರಾಸರಿ 6 ಸಾವಿರ ಜನಸಂಖ್ಯೆಗೆ ಒಂದು ಸಂಘ, ಪ್ರತಿ ನಗರಸಭೆಯಲ್ಲಿ ಸರಾಸರಿ 8 ಸಾವಿರ ಜನಸಂಖ್ಯೆಗೆ ಒಂದು ಸಂಘ ಹಾಗೂ ಮಹಾನಗರ ಪಾಲಿಕೆ ಮತ್ತು ಜಿಬಿಎ ವ್ಯಾಪ್ತಿಯಲ್ಲಿ ಸರಾಸರಿ 10 ಸಾವಿರ ಜನಸಂಖ್ಯೆಗೆ ಒಂದು ಸಂಘ ಸ್ಥಾಪಿಸಲು ಸೂಚನೆಯನ್ನು ನೀಡಿದ್ದೇವೆ ಎಂದು ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಈ ಯೋಜನೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮುಖಾಂತರ ಅನುಷ್ಠಾನ ಮಾಡಲಾಗುವುದು. ಇದಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕಂದಾಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಹಕಾರ ನೀಡಲಿದೆ. ಭಾರತ್ ಜೋಡೋ ಯುವ ಸಂಘಗಳ ಮೂಲಕ ಯುವಜನರಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಿ, ಅವರನ್ನು ಸಬಲೀಕರಣಗೊಳಿಸಿ, ನಾಡಿನ ಸತ್ಪ್ರಜೆಗಳಾಗಿ ರೂಪಿಸುವುದು ನಮ್ಮ ಉದ್ದೇಶ ಎಂದು ಜಿ.ಪರಮೇಶ್ವರ್ ಹೇಳಿದ್ದಾರೆ.
ಸಂಘದ ಸದಸ್ಯರಾಗಲು ಅರ್ಹತೆಯೇನು?
ಈ ಸಂಘದ ಸದಸ್ಯರಾಗಲು ಕನಿಷ್ಠ 16 ವರ್ಷದಿಂದ ಗರಿಷ್ಠ 35 ವರ್ಷ ವಯಸ್ಸಾಗಿರಬೇಕು. ಅಂದರೆ ಯುವಕ/ಯುವತಿಯರಿಗೆ ಮಾತ್ರ ಇಲ್ಲಿ ಅವಕಾಶ. ಇನ್ನೂ, ಪ್ರತಿ ಭಾರತ್ ಜೋಡೋ ಯುವ ಸಂಘದಲ್ಲಿ ಕನಿಷ್ಠ 100 ಜನ ಯುವ ಸದಸ್ಯರು ಇರಲೇಬೇಕು. ಅರ್ಜಿ ಹಾಕುವ ಯುವಕರು ಅದೇ ಗ್ರಾಮ ಪಂಚಾಯಿತಿ ಅಥವಾ ವಾರ್ಡ್ ನಿವಾಸಿಯಾಗಿರಬೇಕು. ಒಬ್ಬ ವ್ಯಕ್ತಿ ಕೇವಲ ಒಂದು ಸಂಘದಲ್ಲಿ ಮಾತ್ರ ಸದಸ್ಯನಾಗಲು ಅರ್ಹನಾಗಿರುತ್ತಾನೆ ಎಂದು ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸಂಘದ ನೋಂದಣಿ ಹೇಗೆ?
‘ಭಾರತ್ ಜೋಡೋ ಯುವ ಸಂಘ’ಗಳ ನೋಂದಣಿ ಪ್ರಕ್ರಿಯೆ ತುಂಬಾ ಸರಳವಾಗಿದ್ದು, ಬಿಜೆವೈಎಸ್ ಆನ್‌ಲೈನ್ ಪೋರ್ಟಲ್ ಅಥವಾ ಮೊಬೈಲ್ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಹಾಕಬಹುದು. ಒಂದು ವೇಳೆ, ಆನ್‌ಲೈನ್ ಗೊತ್ತಿಲ್ಲದಿದ್ದರೆ ಸಮೀಪದ ಗ್ರಾಮ ಪಂಚಾಯಿತಿ ಕಚೇರಿ, ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ನಾಗರಿಕ ಸೇವಾ ಕೇಂದ್ರಗಳ ಸಹಾಯದಿಂದ ಅರ್ಜಿ ಸಲ್ಲಿಸಬಹುದು. ಸಂಘದ ಪ್ರತಿಯೊಬ್ಬ ಸದಸ್ಯರ ನೋಂದಣಿಗೆ ಆಧಾರ್ ಕಾರ್ಡ್ ಕಡ್ಡಾಯ. ಇನ್ನೂ, ಪ್ರತಿ ಸದಸ್ಯನಿಗೆ ಕೇವಲ 10 ರೂ. ನೋಂದಣಿ ಶುಲ್ಕ ಇರುತ್ತದೆ. ಇದರಲ್ಲಿ ಸದಸ್ಯರಿಗೆ ಐಡಿ ಕಾರ್ಡ್ ಕೂಡ ಸಿಗುತ್ತದೆ. ಇದರ ಜೊತೆ ಪ್ರತಿ ಸಂಘವನ್ನು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ಅಡಿಯಲ್ಲಿ ರಿಜಿಸ್ಟರ್ ಮಾಡಲಾಗುತ್ತದೆ ಎಂದು ಜಿ.ಪರಮೇಶ್ವರ್ ತಿಳಿಸಿದ್ದಾರೆ.
"ಸಂಘದ ಅನುದಾನದ ಹಣವನ್ನು ನೀವು ಕ್ರೀಡಾ ಸಾಮಾಗ್ರಿಗಳು, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೇಕಾದ ಉಪಕರಣಗಳು, ಕಂಪ್ಯೂಟರ್, ಇಂಟರ್ನೆಟ್ ಸೌಲಭ್ಯ, ಗ್ರಂಥಾಲಯ ಅಥವಾ ಸಂಘದ ಕಚೇರಿಗೆ ಬೇಕಾದ ಮೂಲಸೌಕರ್ಯಗಳಿಗೆ ಮಾತ್ರ ಬಳಸಬೇಕು ಎಂದು ತಿಳಿಸಲಾಗಿದೆ"






