ಬಿಡದಿ ಟೌನ್‍ಶಿಪ್: ಜನತಾ ನ್ಯಾಯಾಲಯದಲ್ಲಿ ರೈತರ ಅಭಿಪ್ರಾಯ ದಾಖಲು

ರಾಮನಗರ/ ಬಿಡದಿ : ಬಿಡದಿ ಟೌನ್‍ಶಿಪ್ ಯೋಜನೆಗಾಗಿ 9,640 ಎಕರೆ ಫಲವತ್ತಾದ ಕೃಷಿ ಭೂಮಿ ಸ್ವಾಧೀನದ ವಿರುದ್ಧ ಸಂಬಂಧಪಟ್ಟ 26 ಹಳ್ಳಿಗಳ ರೈತರು 500 ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಹಲವರು ಹೋರಾಟದ ಬಗ್ಗೆ ಇಲ್ಲ-ಸಲ್ಲದ ಅಪಪ್ರಚಾರ ಮಾಡುತ್ತಿದ್ದರಿಂದಾಗಿ, ಸತ್ಯಾಸತ್ಯತೆಯನ್ನು ಸಾರ್ವಜನಿಕ ಪರಿಶೀಲನೆಗೆ ಒಳಪಡಿಸುವ ಸಲುವಾಗಿ ರೈತರು ಜನತಾ ನ್ಯಾಯಾಲಯದ ಮುಂದೆ ತಮ್ಮ ಅಭಿಪ್ರಾಯಗಳನ್ನು ದಾಖಲಿಸಿದರು.
ಗುರುವಾರ ಬೈರಮಂಗಲ ವೃತ್ತದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಅಹವಾಲು(ಜನತಾ ನ್ಯಾಯಾಲಯ)ನಲ್ಲಿ ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಕೃಷಿ ತಜ್ಞ ಡಾ. ಪ್ರಕಾಶ್ ಕಮ್ಮರಡಿ, ಸಮಾಜಶಾಸ್ತ್ರಜ್ಞೆ ಡಾ.ಎ.ಆರ್.ವಾಸವಿ, ಹಿರಿಯ ಪತ್ರಕರ್ತ ಡಿ.ಉಮಾಪತಿ, ವಕೀಲೆ ಮೈತ್ರೇಯಿ ಕೃಷ್ಣನ್ ಜನತಾ ನ್ಯಾಯಪೀಠದ ಸದಸ್ಯರಾಗಿ ರೈತರ ಅಹವಾಲುಗಳನ್ನು ಆಲಿಸಿದರು.
26 ಹಳ್ಳಿಗಳ ರೈತರು ವೇದಿಕೆಯಲ್ಲಿಯೇ ರೂಪಿಸಿದ್ದ ಸಾಕ್ಷಿ ಪೆಟ್ಟಿಗೆ(ವಿಟ್ನೆಸ್ ಬಾಕ್ಸ್)ಯಲ್ಲಿ ನಿಂತು ತಮ್ಮ ನೋವು, ಆತಂಕ ಮತ್ತು ಆಕ್ಷೇಪಣೆಗಳನ್ನು ನ್ಯಾಯಾಧೀಶರ ಹಾಗೂ ಸಾರ್ವಜನಿಕರ ಮುಂದೆ ಮಂಡಿಸಿದರು.
ಹೋರಾಟದ ಪ್ರಮುಖ ಸಂಚಾಲಕ ಬಡಗಲಪುರ ನಾಗೇಂದ್ರ ಮಾತನಾಡಿ, 500 ದಿನಗಳಿಂದ ರೈತರು ಅನಿರ್ದಿಷ್ಟ ಧರಣಿ ನಡೆಸುತ್ತಿದಾರೆ. ಏಕೆ ಹೋರಾಟ ಮಾಡುತ್ತಿದ್ದೀರಿ, ನಿಮ್ಮ ನೋವು ಏನು? ಎಂದು ರಾಜ್ಯ ಸರಕಾರ, ಜಿಲ್ಲಾಡಳಿತ ಅಥವಾ ಜನಪ್ರತಿನಿಧಿಗಳು ಯಾರೂ ಕೇಳಲಿಲ್ಲ. ಇಂದು ಜನತಾ ನ್ಯಾಯಾಲಯದ ಮೂಲಕ ರೈತರು ನೋವನ್ನು ಸಮಾಜದ ಮುಂದೆ ಇಡುತ್ತಿದ್ದಾರೆ ಎಂದರು.
ಜನತಾ ನ್ಯಾಯಾಲಯವೇ ಸಂವಿಧಾನದ ನಿಜವಾದ ಕನಸು. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಜನಪರವಾಗಿ ಸ್ಪಂದಿಸದಾಗ ಸಂವಿಧಾನದ ನಿಜವಾದ ಮಾಲಕರಾದ ಜನರೇ ಬೀದಿಯಲ್ಲಿ ನಿಂತು ನ್ಯಾಯವನ್ನು ಕೋರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪ್ರಜಾಪ್ರಭುತ್ವ, ಪರಿಸರ ಸಂರಕ್ಷಣೆ ಮತ್ತು ಜನರ ಬದುಕಿನ ಪ್ರಶ್ನೆಗಳ ಕುರಿತು ಸಾರ್ವಜನಿಕ ಸಂವಾದ ನಡೆಸುವ ವೇದಿಕೆಯಾಗಿಯೇ ಈ ಜನತಾ ನ್ಯಾಯಾಲಯವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
2013ರ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರುಜ್ಜೀವನ ಕಾಯ್ದೆಯ ಮೂಲಭೂತ ತತ್ವಗಳನ್ನು ಈ ಪ್ರಕ್ರಿಯೆ ಉಲ್ಲಂಘಿಸಿದೆ. ಫಲವತ್ತಾದ, ನೀರಾವರಿ ಹಾಗೂ ತೋಟಗಾರಿಕೆ ಪ್ರದೇಶವನ್ನು 'ರೆಡ್ ಝೋನ್' ಎಂದು ಘೋಷಿಸಿರುವುದು ತಪ್ಪು ನಿರ್ಧಾರವಾಗಿದ್ದು, ಅದನ್ನು ಮರುಪರಿಶೀಲಿಸಿ, ಹಸಿರು ವಲಯವಾಗಿ ಘೋಷಿಸಬೇಕು. ಕಾಯ್ದೆಯ ಪ್ರಕಾರ ಭೂಸ್ವಾಧೀನಕ್ಕೆ ಶೇ.70-80 ರೈತರ ಸಮ್ಮತಿ ಅಗತ್ಯವಿದ್ದರೂ, ಸರಕಾರ ಶೇ.80ಕ್ಕೂ ಹೆಚ್ಚು ರೈತರು ಒಪ್ಪಿದ್ದಾರೆ ಎಂದು ಪ್ರಚಾರ ಮಾಡುತ್ತಿದೆ. ಆದರೆ ವಾಸ್ತವದಲ್ಲಿ 26 ಹಳ್ಳಿಗಳ ಬಹುಪಾಲು ರೈತರು ಭೂಸ್ವಾಧೀನವನ್ನು ವಿರೋಧಿಸುತ್ತಿದ್ದಾರೆ ಎಂದು ಬಡಗಲಪುರ ನಾಗೇಂದ್ರ ಹೇಳಿದರು.
ಸಭೆಯಲ್ಲಿ ರೈತರು ಹಲವು ಗಂಭೀರ ಆರೋಪಗಳನ್ನು ಮಾಡಿದರು. ಭೂಮಿ ನೀಡಲು ಇಚ್ಛಿಸದ ರೈತರ ಮೇಲೆ ಒತ್ತಡ ಹಾಗೂ ಬೆದರಿಕೆ ಹಾಕಿ ಸಹಿ ಪಡೆಯಲಾಗುತ್ತಿದೆ. ಕೆಲವು ಕಡೆ ಒಂದೇ ಕುಟುಂಬದ ಅಣ್ಣ-ತಮ್ಮರ ನಡುವೆ ಭಿನ್ನಾಭಿಪ್ರಾಯ ಉಂಟುಮಾಡುವ ಪ್ರಯತ್ನ ನಡೆಯುತ್ತಿದೆ. ಅಷ್ಟೇ ಅಲ್ಲದೇ ಶೇ.10ರಷ್ಟು ಭೂಮಿ ನೀಡಲು ಮುಂದಾಗಿರುವ ಜನರು, ಶೇ.90ರಷ್ಟು ಜನರಿಗೆ ಬೆದರಿಕೆ ಹಾಕುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ಜನತಾ ನ್ಯಾಯಾಲಯದಲ್ಲಿ ಕೇಳಿ ಬಂದವು.
ಈ ಪ್ರದೇಶದಲ್ಲಿ ರೈತರು ತೆಂಗು, ಅಡಿಕೆ, ಸಪೋಟ, ಮಾವು, ಹಲಸು, ಹುಣಸೆ, ಬಾಳೆ, ಜೋಳ ಸೇರಿದಂತೆ ವಿವಿಧ ಬಹುವಾರ್ಷಿಕ ಬೆಳೆಗಳನ್ನು ಬೆಳೆಸುವುದರ ಜೊತೆಗೆ ಹೈನುಗಾರಿಕೆಯನ್ನು ಅವಲಂಬಿಸಿ ವರ್ಷಕ್ಕೆ ಸರಾಸರಿ ಸುಮಾರು 11 ಲಕ್ಷ ರೂ.ಆದಾಯ ಗಳಿಸಲಾಗುತ್ತಿದೆ ಎನ್ನುವ ಮಾಹಿತಿಯನ್ನು ರೈತರು ನೀಡಿದರು.
ಸಭೆಯ ಅಂತ್ಯದಲ್ಲಿ ಜನತಾ ನ್ಯಾಯಪೀಠವು ರೈತರ ಅಹವಾಲುಗಳನ್ನು ದಾಖಲಿಸಿಕೊಂಡು, ಸರಕಾರವು ಸಂವಾದದ ಮೂಲಕ ಸಮಸ್ಯೆ ಬಗೆಹರಿಸುವಂತೆ ಹಾಗೂ ಕಾನೂನುಬದ್ಧ ಪ್ರಕ್ರಿಯೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಿದರು. ಜನತಾ ನ್ಯಾಯಾಲಯದಲ್ಲಿ ಬಂದಿರುವ ಎಲ್ಲ ಅಭಿಪ್ರಾಯಗಳನ್ನು ಸಂಗ್ರಹಿಸಿ, ಮುಂದಿನ ಸೋಮವಾರದೊಳಗಾಗಿ ತೀರ್ಪನ್ನು ಪ್ರಕಟಿಸುತ್ತೇವೆ ಎಂದು ವೇದಿಕೆಯಲ್ಲಿದ್ದ ನ್ಯಾಯಪೀಠವು ತಿಳಿಸಿತು.
26 ಹಳ್ಳಿಗಳ ರೈತರ ಸಾಕ್ಷ್ಯ:
ನಾಗರಜು-ಮಂಡಲಹಳ್ಳಿ: ನಮ್ಮ ಊರಿನಲ್ಲಿ ಏಳು ಕುಟುಂಬಗಳಿದ್ದು, ಯಾರೂ ಭೂಮಿ ನೀಡಲು ಸಿದ್ಧರಿಲ್ಲ.
ಸುಮಿತ್ರ- ಮರವೇಗೌಡನ ದೊಡ್ಡಿ: ನಮ್ಮೂರಿನಲ್ಲಿ 280 ಕುಟುಂಬಗಳಿದ್ದು, ಕೇವಲ 5 ಮಂದಿ ಮಾತ್ರ ಒಪ್ಪಿಗೆ ನೀಡಿದ್ದಾರೆ.
ಸುಜಾತ-ಅರಳಾಲುಸಂದ್ರ: 85 ಕುಟುಂಬಗಳಲ್ಲಿ ಯಾರೂ ಭೂಮಿ ಕೊಡಲು ಸಿದ್ಧರಿಲ್ಲ.
ಜಯಮ್ಮ-ಕೋಡಿಹಳ್ಳಿ: 77 ರೈತರಲ್ಲಿ ಯಾರೂ ಭೂಮಿ ನೀಡಲು ಇಚ್ಛಿಸಿಲ್ಲ.
ರೇವಣ್ಣ-ಬನ್ನಿಗಿರಿ: 180 ಮನೆಗಳಲ್ಲಿ ಕೇವಲ ನಾಲ್ಕು ಮನೆಗಳವರು ಮಾತ್ರ ಒಪ್ಪಿಗೆ ಸೂಚಿಸಿದ್ದು, ಅವರಲ್ಲಿಯೂ ಗೊಂದಲವಿದೆ.
ಸುಮಾ-ಕಂಚುಗಾರನಹಳ್ಳಿ: 300 ಕುಟುಂಬಗಳಲ್ಲಿ ಕೇವಲ 7 ಕುಟುಂಬಗಳು ಮಾತ್ರ ಸಮ್ಮತಿ ಸೂಚಿಸಿದ್ದಾರೆ.
ಹೊಸೂರು: 250 ಮನೆಗಳಲ್ಲಿ ಸುಮಾರು 200 ಕುಟುಂಬಗಳು ವಿರೋಧ.
ಮಂಜುನಾಥ್-ಕೆಂಪಶೆಟ್ಟಿದೊಡ್ಡಿ: 150 ಕುಟುಂಬಗಳಲ್ಲಿ ಕೇವಲ 5 ಕುಟುಂಬಗಳು ಒಪ್ಪಿಗೆ ನೀಡಿದ್ದಾರೆ.
ಮುತ್ತುರಾಜು-ಗುಂಡುತೋಪು: ಎಲ್ಲರೂ ಭೂಸ್ವಾಧೀನಕ್ಕೆ ವಿರೋಧ.
ಮಂಜುನಾಥ್-ಬೈರಮಂಗಲ: 800 ಕುಟುಂಬಗಳಲ್ಲಿ 10–15 ಮಂದಿ ಮಾತ್ರ ಭೂಮಿ ನೀಡಲು ಮುಂದಾಗಿದ್ದಾರೆ.
ಶಾಂಭವಿ-ಸಿದ್ದಯ್ಯನದೊಡ್ಡಿ: ಮಹಿಳೆಯರು ಸೇರಿದಂತೆ ಎಲ್ಲರೂ ಭೂಸ್ವಾಧೀನಕ್ಕೆ ವಿರೋಧ.
ಕೀರ್ತಿ-ಕೆ.ಜಿ.ಗೊಲ್ಲರಪಾಳ್ಯ: 221 ಖಾತೆದಾರರಲ್ಲಿ ಕೇವಲ 20 ಮಂದಿ ಒಪ್ಪಿಗೆ.
ಕೃಷ್ಣಮೂರ್ತಿ-ತಾಯಪ್ಪನದೊಡ್ಡಿ: ಶೇ.95ರಷ್ಟು ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
ನಾಗರಾಜು-ನಂಜೇಗೌಡನದೊಡ್ಡಿ: 156 ಕುಟುಂಬಗಳಲ್ಲಿ ಕೇವಲ ನಾಲ್ಕು ಮನೆಗಳು ಮಾತ್ರ ಸಮ್ಮತಿ.
ನಾಗೇಶ್-ಚಿಕ್ಕಬೈರಮಂಗಲ: 40 ಕುಟುಂಬಗಳಲ್ಲಿ ಐದು ಮಂದಿ ಮಾತ್ರ ಒಪ್ಪಿಗೆ.
ಅಂಗರಪಾಳ್ಯ ಹಾಗೂ ಮಠದಬಯಲು: ಯಾರೂ ಭೂಮಿ ನೀಡಲು ಸಿದ್ಧರಿಲ್ಲ.
ಅಂಚೀಪುರ: ಶೇ.60ರಷ್ಟು ರೈತರು ಭೂಸ್ವಾಧೀನಕ್ಕೆ ವಿರೋಧ.






