ಬಿಡದಿ ಟೌನ್ಶಿಪ್ ವಿಚಾರ: ಜೂ.26ರಂದು ಚರ್ಚೆಗೆ ಆಗಮಿಸುವಂತೆ ಎಚ್.ಡಿ. ಕುಮಾರಸ್ವಾಮಿಗೆ ಸಿಎಂ ಡಿ.ಕೆ.ಶಿವಕುಮಾರ್ ಪತ್ರ

ಸಿಎಂ ಡಿ.ಕೆ.ಶಿವಕುಮಾರ್ / ಸಚಿವ ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆ ಸಂಬಂಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಪತ್ರ ಬರೆದಿರುವ ಸಿಎಂ ಡಿ.ಕೆ.ಶಿವಕುಮಾರ್, ಜೂ.26ರಂದು ಚರ್ಚೆಗೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ.
ತಾವು ಪ್ರಾರಂಭಿಸಿದ ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ತಮ್ಮ ಜೊತೆ ನಾನು ಚರ್ಚಿಸಲು ಉತ್ಸುಕನಾಗಿದ್ದು, ಜೂ.26ರಂದು ಬೆಳಗ್ಗೆ 11 ಗಂಟೆಗೆ ವಿಧಾನಸೌಧಕ್ಕೆ ತಾವು ಮತ್ತು ತಮ್ಮ ತಂಡದ ಐದು ಪ್ರತಿನಿಧಿಗಳೊಂದಿಗೆ ನನ್ನ ಕಚೇರಿಗೆ ಆಗಮಿಸುವಂತೆ ಕೋರುತ್ತೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ಪತ್ರ ಬರೆದು ಆಹ್ವಾನ ನೀಡಿದ್ದಾರೆ.
ಇದಕ್ಕೂ ಮೊದಲು ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ್ದ ಸಿಎಂ ಅವರು, "ಬಿಡದಿ ಟೌನ್ಶಿಪ್ ವಿಚಾರವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪರವಾಗಿ ಜೆಡಿಎಸ್ನವರು ಅಧಿವೇಶನದಲ್ಲಿ ಚರ್ಚೆ ಮಾಡಲಿ, ಉತ್ತರ ಕೊಡೋಣ. ನಾನು ಈಗ ಏನನ್ನೂ ಮಾತನಾಡುವುದಿಲ್ಲ. ಹಿಂದೆಯೆ ಚರ್ಚೆಗೆ ಕರೆದಿದ್ದೆ. ಅದರೆ ಬರಲಿಲ್ಲ. ಮುಂದಿನ ಅಧಿವೇಶನದಲ್ಲಿ ಅವರ ಪಕ್ಷದ, ಇತರ ಅನುಭವಿ ರಾಜಕಾರಣಿಗಳ ಮೂಲಕ ಚರ್ಚೆ ಮಾಡಿಸಲಿ" ಎಂದು ಮುಖ್ಯಮಂತ್ರಿ ಹೇಳಿದ್ದರು.




