ಬಿಡದಿ ಟೌನ್‍ಶಿಪ್ : ಮೂರು ಗ್ರಾಮಗಳ 518 ಎಕರೆ ಭೂಮಿ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟ

ಬೆಂಗಳೂರು : ರೈತರ ತೀವ್ರ ವಿರೋಧದ ನಡುವೆ ಉದ್ದೇಶಿತ ‘ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ನಿರ್ಮಾಣ ಯೋಜನೆ(ಬಿಡದಿ ಟೌನ್‍ಶಿಪ್)ಗೆ, ಮೊದಲ ಹಂತದಲ್ಲಿ ಮೂರು ಗ್ರಾಮಗಳ 518 ಎಕರೆ ಭೂಮಿ ಸ್ವಾಧೀನಕ್ಕೆ ರಾಜ್ಯ ಸರಕಾರ ಶುಕ್ರವಾರ ಅಂತಿಮ ಅಧಿಸೂಚನೆ ಹೊರಡಿಸಿದೆ.
ಶುಕ್ರವಾರ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ರಾಜೇಶ್ ಎಸ್. ಸೂಳಿಕೇರಿ ಅವರು, ಬೆಂಗಳೂರು ದಕ್ಷಿಣ ಜಿಲ್ಲೆ ಬಿಡದಿ ಬಳಿಯ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ, ವಡೇರಹಳ್ಳಿಯ ವ್ಯಾಪ್ತಿಯ ಒಟ್ಟು 754 ಮಂದಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದ್ದು, ಮೂರು ಹಳ್ಳಿಗಳ ಒಟ್ಟು 518 ಎಕರೆ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟಿಸಿದ್ದಾರೆ.
ನಗರಾಭಿವೃದ್ಧಿ ಇಲಾಖೆಯು ಜೂ.10ರಂದು ಕೆಂಪಯ್ಯನಪಾಳ್ಯದ 384.22 ಎಕರೆ, ಮಂಡಲಹಳ್ಳಿಯ 71.13 ಎಕರೆ ಹಾಗೂ ವಡೇರಹಳ್ಳಿಯ 63.10 ಎಕರೆ ಸೇರಿದಂತೆ ಒಟ್ಟು 518 ಎಕರೆ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಸರಕಾರ ಅಧಿಸೂಚನೆ ಹೊರಡಿಸಿದ್ದು, ಮೊದಲ ಹಂತದ ಭೂಮಿ ಸ್ವಾಧೀನವು ರಾಮನಗರ ಹಾಗೂ ಹಾರೋಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ನಡೆಯಲಿದೆ ಎಂದು ಉಲ್ಲೇಖಿಸಿದೆ.
ಭೂ ಸ್ವಾಧೀನಕ್ಕೆ ಪ್ರತಿ ಎಕರೆ ಕನಿಷ್ಠ 2.07 ಕೋಟಿ ರೂಪಾಯಿಗಳಿಂದ 2.5 ಕೋಟಿ ರೂಪಾಯಿಗಳ ವರೆಗೆ ಪರಿಹಾರ ನೀಡಲಾಗುವುದು ಎಂದು ಪ್ರಸ್ತಾಪಿಸಲಾಗಿದೆ. ಪರಿಹಾರಕ್ಕೆ ಮತ್ತೊಂದು ಆಯ್ಕೆಯಾಗಿ, ಶೇ.50ರಷ್ಟು ಅಭಿವೃದ್ಧಿಪಡಿಸಿದ ಭೂಮಿಯನ್ನು ರೈತರಿಗೆ ಹಿಂತಿರುಗಿಸುವ ವ್ಯವಸ್ಥೆಯನ್ನೂ ಅಧಿಸೂಚನೆಯಲ್ಲಿ ತಿಳಿಸಿದೆ. ರೈತರು ತಮ್ಮ ಭೂಮಿಗೆ ಸಂಬಂಧಿಸಿದ ಎಲ್ಲ ಸೂಕ್ತ ದಾಖಲೆಗಳನ್ನು ಸಲ್ಲಿಸಿ, ನಿರ್ದಿಷ್ಟ ಸಮಯದಲ್ಲಿ ಪರಿಹಾರವನ್ನು ಪಡೆಯಬಹುದು ಎಂದು ಅಧಿಸೂಚನೆಯಲ್ಲಿ ಹೇಳಿದೆ.
ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು, ತಂತ್ರಜ್ಞಾನ ಆಧಾರಿತ ಕೈಗಾರಿಕಾ ವಲಯಗಳನ್ನು ಸ್ಥಾಪಿಸುವುದು ಮತ್ತು ಆಧುನಿಕ ನಗರ ಸೌಲಭ್ಯಗಳನ್ನು ಕಲ್ಪಿಸುವುದು ಈ ಟೌನ್‍ಶಿಪ್ ನಿರ್ಮಾಣದ ಮುಖ್ಯ ಉದ್ದೇಶವಾಗಿದೆ. 20ಸಾವಿರ ಕೋಟಿ ರೂ.ವೆಚ್ಚದ ಈ ಯೋಜನೆಯನ್ನು ದೇಶದ ಮೊದಲ ಎಐ ಸಿಟಿ ಎಂದು ಬಿಂಬಿಸಲಾಗಿದೆ. ಸುಮಾರು 7,481 ಎಕರೆ ಪ್ರದೇಶದಲ್ಲಿ ವಿಸ್ತರಣೆಯಾಗಲಿದೆ ಎಂದು ಸರಕಾರ ತಿಳಿಸಿದೆ.
ಉದ್ದೇಶಿತ ಯೋಜನೆಯ ಭೂ ಸ್ವಾಧೀನಕ್ಕೆ ಗುರುತಿಸಿರುವ ಪ್ರದೇಶಗಳಲ್ಲಿ ಅತ್ಯಂತ ಫಲವತ್ತಾದ ಕೃಷಿ ಭೂಮಿಯಿದ್ದು, ತೆಂಗು, ಮಾವು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಈ ವ್ಯಾಪ್ತಿಯಲ್ಲಿನ ಪ್ರದೇಶವು ಸಾವಿರಾರು ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿದ್ದು ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಭೂಮಿ ಕಳೆದುಕೊಂಡರೆ ಕೃಷಿ ಆಧಾರಿತ ಚಟುವಟಿಕೆಗಳು ಮತ್ತು ಪಶುಪಾಲನೆ, ಹೈನುಗಾರಿಕೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ. ಈ ಹಿಂದೆ 2025ರ ಫೆಬ್ರವರಿಯಲ್ಲಿ ಔಪಚಾರಿಕ ಅನುಮೋದನೆ ನೀಡಲಾಗಿತ್ತು. ಬಿಡಿಎ 2025ರ ಮಾರ್ಚ್‍ನಲ್ಲಿ ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು.
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ಮತ್ತು ಹಾರೋಹಳ್ಳಿ ತಾಲೂಕುಗಳ ಭೈರಗೊಂಡನಹಳ್ಳಿ, ಗಾಲಾ, ಬನ್ನಿಗಿರಿ, ವಡೇರಹಳ್ಳಿ, ಕಂಚುಗಾರನಹಳ್ಳಿ, ಕೆಂಪಯ್ಯನ ಪಾಳ್ಯ, ಕೆ.ಜಿ ಗೊಲ್ಲರಪಾಳ್ಯ, ಹೊಸೂರು, ಮಂಡಲಹಳ್ಳಿ, ಅರಳಾಲುಸಂದ್ರ ಗ್ರಾಮಗಳ ಭೂಮಿ ಯೋಜನೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಲಾಗಿದೆ.






